ಕಾಸರಗೋಡು : ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪಡೆದಿದೆ. ಈ ಹೆಗ್ಗಳಿಕೆಯ ಜೊತೆಗೆ ಕನ್ನಡ ಪುಸ್ತಕಗಳನ್ನು ಖರೀದಿಸಿ, ಓದುವವರ ಕೊರತೆಯೂ ಇದೆ. ಈ ಹಿನ್ನೆಲೆಯಲ್ಲಿ ಸುಮಾರು 1 ಲಕ್ಷ ಮನೆಗಳಲ್ಲಿ ತಲಾ 1 ಲಕ್ಷ ಮೌಲ್ಯದ ಪುಸ್ತಕ ಇರುವ ಗ್ರಂಥಾಲಯ ಸೃಷ್ಟಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ’ ಎಂದು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮೈಸೂರು ಹೇಳಿದರು. ಅವರು ಭಾನುವಾರ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆಯಾದ ‘ ಮನೆಗೊಂದು ಗ್ರಂಥಾಲಯ’ ಯೋಜನೆಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
‘ಕನ್ನಡಿಗರಲ್ಲಿ ಪುಸ್ತಕಗಳನ್ನು ಖರೀದಿಸಿ ಓದುವ ಮನೋಭಾವ ಜಾಗೃತವಾಗಬೇಕು. ಕನ್ನಡ ಭಾಷೆಯಲ್ಲಿ ಅನೇಕ ಉತ್ತಮ ಬರಹಗಾರರಿದ್ದು, ಈ ನಾಡಿನಾದ್ಯಂತ ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ಪ್ರಕಾಶ್ಚಂದ್ರ ಕಾಸರಗೋಡು, ಸಂಧ್ಯಾರಾಣಿ ಟೀಚರ್, ಪ್ರೋ. ಪಿ ಎನ್ ಮೂಡಿತ್ತಾಯ, ಪ್ರೋ. ಎ ಶ್ರೀನಾಥ್, ತೆಕ್ಕೆಕೆರೆ ಶಂಕರನಾರಾಯಣ ಭಟ್, ಬಾಲ ಮಧುರಕಾನನ, ವಿ ಬಿ ಕುಳಮರ್ವ, ಶ್ರೀಹರಿ ಭಟ್ ಪೆಲ್ತಾಜೆ, ವಿರಾಜ್ ಅಡೂರು, ವಸಂತ ಕೆರೆಮನೆ, ಶಾರದಾ ಮೊಳೆಯಾರ್, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಪ್ರಭಾವತಿ ಕೆದಿಲಾಯ ಪುಂಡೂರು, ವಿಶಾಲಾಕ್ಷ ಪುತ್ರಕಳ ಮೊದಲಾದವರು ಇದ್ದರು.