ಪೋಲೀಸ್ ಉದ್ಯೋಗದಲ್ಲಿರುವ ಪತ್ನಿಯನ್ನು ಸ್ವತಃ ಪತಿಯೇ ಅಟ್ಟಾಡಿಸಿ ಕೊಚ್ಚಿ ಕೊಲೆಗೈದು, ಪತ್ನಿಯ ಅಪ್ಪನಾದ ಮಾವನನ್ನೂ ಕೊಲೆಗೆಯತ್ನಿಸಿದ ಘಟನೆ ಕಾಸರಗೋಡು ಜಿಲ್ಲೆಯ ಗಡಿಯಲ್ಲೇ ನಡೆದಿದೆ. ಕಾಸರಗೋಡು ಜಿಲ್ಲೆಯ ಚಂದೇರ ಪೋಲೀಸ್ ಠಾಣಾ ಸಿಪಿಒ ಉದ್ಯೋಗಿ ದಿವ್ಯಶ್ರೀ ಎಂಬಾಕೆ ತನ್ನ ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಈಕೆ ಕೊಲೆ ನಡೆಯುವಾಗ ತಡೆಯಲು ಬಂದ ಆಕೆಯ ತಂದೆ ವಾಸು ಎಂಬವರ ಕೊರಳು, ಹೊಟ್ಟೆಗೆ ಕತ್ತಿ ಇರಿತ, ಕಡಿತಗಳ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗುರುವಾರ (ನ.21) ಮುಸ್ಸಂಜೆ ಈ ದುಷ್ಕೃತ್ಯ ನಡೆದಿದ್ದು, ಆರೋಪಿ ರಾಜೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಪತಿ-ಪತ್ನಿಯರಾದ ರಾಜೇಶ ಮತ್ತು ದಿವ್ಯಶ್ರೀ ಕಳೆದ ಕೆಲ ಸಮಯಗಳಿಂದ ಒಟ್ಟಿಗೆ ಬದುಕುತ್ತಿರಲಿಲ್ಲ. ಅವರ ದಾಂಪತ್ಯದಲ್ಲಿ ಸಮಸ್ಯೆಗಳಿದ್ದ ಕಾರಣ ಈರ್ವರೂ ಬೇರೆಯೇ ವಾಸಿಸುತ್ತಿದ್ದರು. ಗುರುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಳೆಂದು ತಿಳಿದೇ ಬಂದ ಆರೋಪಿ ಆಕೆಯನ್ನು ಆಕ್ರಮಿಸಿ, ಓಡಿಸಿ ಕೊಲೆಗೈದನೆಂದೂ, ಈ ವೇಳೆ ತಡೆಯಲು ಬಂದ ಮಾವನನ್ನೂ ಆಕ್ರಮಿಸಿ ಕೊಲೆಗೆತ್ನಿಸಿದನೆಂದೂ ಮಾಹಿತಿ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೃತ ಪೋಲೀಸ್ ಉದ್ಯೋಗಿ ದಿವ್ಯಶ್ರೀಯ ಪತಿ ರಾಜೇಶನನ್ನು ಪೋಲೀಸರು ಬಂಧಿಸಿದ್ದಾರೆ.