ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ “ಕಾವ್ಯ ಕುಂಚ” ಐದನೇ ಭಾಗದ ಕವನ ಸಂಕಲನ ಮತ್ತು “ಕುಂಚ ಕೈಪಿಡಿ” ಲೇಖನಗಳ ಸಂಗ್ರಹದ ಪುಸ್ತಕ ಮಾರ್ಚ್ 2 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ರೋಟರಿ ಬಾಲಭವನದಲ್ಲಿ ಲೋಕಾರ್ಪಣೆ ಆಗಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಕವಿಗೋಷ್ಠಿ ಅಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಡೆಯಲಿದ್ದು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕವಿ, ಕವಯತ್ರಿಯರು ಕವನ ವಾಚನ ಮಾಡಲಿದ್ದಾರೆ. ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದ ರಾಯಚೂರಿನ ಕವಯತ್ರಿ, ಸಾಹಿತಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕದರಾದ ಗಿರಿಜಾ ಮಾಲಿ ಪಾಟೀಲ್ “ಕಾವ್ಯ ಕುಂಚ” ಕವನ ಸಂಕಲನ ಮತ್ತು “ಕುಂಚ ಕೈಪಿಡಿ” ಪುಸ್ತಕ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರು, ಕವನ ಸಂಕಲನದ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮುಡುಬಿದಿರೆಯ ಹಿರಿಯ ಸಾಹಿತಿ, ಕವಿ ಡಾ. ರಾಮಕೃಷ್ಣ ಶಿರೂರು, ಯುವ ಕವಯತ್ರಿ, ಸಾಹಿತಿ ಈ ಕವನ ಸಂಕಲನಕ್ಕೆ ಬೆನ್ನುಡಿ ಬರೆದ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಡಾ. ಶ್ರೀದೇವಿ ಸೂರ್ಯಕಾಂತ ಸುವರ್ಣ ಖಂಡಿ ಆಗಮಿಸಲಿದ್ದಾರೆ.
ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕವನ ಸಂಕಲನದ ಸಹ ಸಂಪಾದಕರೂ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವನ ವಾಚನ ಮಾಡಿದ ಕವಿ, ಕವಯತ್ರಿಯರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ಹಾಗೂ ಕಾವ್ಯ ಕುಂಚ ಕವನ ಸಂಕಲನ ವಿತರಿಸಲಾಗುವುದು ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ಪ್ರಕಟಿಸಿದ್ದಾರೆ.
ಸರ್ವ ಸಾಹಿತ್ಯಾಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಸಾಹಿತ್ಯ ಸಂಭ್ರಮದ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಕಛೇರಿ ಕಾರ್ಯದರ್ಶಿ ಎಂ.ಎಸ್.ಪ್ರಸಾದ್ ವಿನಂತಿಸಿದ್ದಾರೆ. ಕಲಾಕುಂಚದ ವಿವಿಧ ಬಡಾವಣೆಗಳ ಶಾಖೆಗಳ ಅಧ್ಯಕ್ಷರುಗಳಾದ ಪ್ರಭಾ ರವೀಂದ್ರ, ವಿ.ಕೃಷ್ಣಮೂರ್ತಿ, ರಾಜಶೇಖರ ಬೆನ್ನೂರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಲಲಿತಾ ಕಲ್ಲೇಶ್ ಉಪಸ್ಥಿತರಿದ್ದರು.