ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಲಂಚದ ರೂಪದಲ್ಲಿ ಪಡೆದ 100 ಕೋಟಿ ರೂ. ಹಣದಲ್ಲಿ ಕೆಲವು ಭಾಗವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ವತಃ ಬಳಸಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಕೇಜ್ರಿವಾಲ್ ಗೋವಾದ ಐಶಾರಾಮಿ ಹೋಟೆಲ್‌ನಲ್ಲಿ ತಂಗಲು ಈ ಹಣ ಬಳಕೆ ಮಾಡಿದ್ದರು ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ಅಬಕಾರಿ ನೀತಿಗೆ ಸಂಬಂಧಿಸಿ ದೆಹಲಿ ಸರ್ಕಾರ ಸಚಿವರ ಗುಂಪು ರಚಿಸಿದ್ದೇ ಒಂದು ವಂಚನೆಯಾಗಿದೆ. ಅರವಿಂದ ಕೇಜ್ರಿವಾಲ್ ಅವರೇ ಈ ಹಗರಣದ ಮುಖ್ಯ ಸಂಚುಕೋರ. ಸಚಿವರು ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಇತರ ಕೆಲವರೊಂದಿಗೆ ಕೈ ಜೋಡಿಸಿ ಈ ಅಕ್ರಮ ಎಸಗಿದ್ದಾರೆ ಎಂದು ಇಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಕುರಿತ ವಿಶೇಷ ನ್ಯಾಯಾಲಯವು ಪ್ರಾಸಿಕ್ಯೂಶನ್ ಮೇ 17ರಂದು ಸಲ್ಲಿಸಿರುವ ದೂರನ್ನು ಮಂಗಳವಾರ ಪರಿಗಣನೆಗೆ ತೆಗೆದುಕೊಂಡಿದ್ದು, ಕೇಜ್ರಿವಾಲ್ ಅವರನ್ನು ಜು. 12ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶಿಸಿದೆ.