ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಭರ್ಜರಿ ಗೆಲುವು ಸಾಧಿಸಿ, 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣೀಭೂತರಾದ ದೆಹಲಿ ಮತದಾರರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ. ನಡ್ದಾ ಅಭಿನಂದನಾರ್ಹರು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಭ್ರಷ್ಟಚಾರ ವಿರುದ್ಧದ ಹೋರಾಟದ ಮೂಲಕ ರಾಜಕೀಯ ಮುನ್ನೆಲೆಗೆ ಬಂದಿರುವ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಅಧಿಕಾರದ ಗದ್ದುಗೆ ಏರಿದ ಬಳಿಕ ಭ್ರಷ್ಟಾಚಾರವನ್ನೇ ಉಸಿರಾಗಿಸಿಕೊಂಡು, ಶೀಷ್ ಮಹಲ್, ಅಬಕಾರಿ ಹಗರಣಗಳಿಂದ ಜೈಲುವಾಸ ಅನುಭವಿಸಿದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಕೆಲವು ತಿಂಗಳುಗಳ ಕಾಲ ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿ, ಭ್ರಷ್ಟಾಚಾರವನ್ನು ಪೋಷಿಸುತ್ತಾ ಬಂದಿರುವುದಕ್ಕೆ ದೆಹಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.
ಸುಧೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿ ಸತತ ಮೂರು ಬಾರಿಯೂ ಶೂನ್ಯ ಸಂಪಾದನೆ ಮಾಡಿರುವುದು ನಾಚಿಕೆಗೇಡು. ಅಭಿವೃದ್ಧಿಗೆ ತಿಲಾಂಜಲಿಯನ್ನಿತ್ತು ಐಶಾರಾಮಿ ನೀತಿ ಮತ್ತು ಎಲ್ಲೆ ಮೀರಿದ ಭ್ರಷ್ಟಾಚಾರದಿಂದ ಆಮ್ ಆದ್ಮಿ ಪಾರ್ಟಿ ದೆಹಲಿ ಚುನಾವಣೆಯಲ್ಲಿ ಹೀನಾಯ ಸೋಲುoಡಿದಿರುವ ಮಾದರಿ ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಪರ ಆಡಳಿತ ವೈಖರಿ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿರುವುದು ಕೂಡಾ ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿಗೆ ಪೂರಕವಾಗಿದ್ದು, ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ವಿಜಯಪತಾಕೆ ಉತ್ತುಂಗಕ್ಕೇರಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.