ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಅತ್ಯಾಚಾರ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನಿರೀಕ್ಷಣಾ ಮತ್ತು ಸಾಮಾನ್ಯ ಜಾಮೀನು ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಈ ಅರ್ಜಿಯ ವಿಚಾರಣೆ ನಡೆಸಿದರು.
ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ತನಿಖಾ ದಳದ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಮಾಧ್ಯಮಗಳಲ್ಲಿ ಬಿಂಬಿಸಿರುವಂತೆ ಎಸ್ ಐಟಿ ಜಾರಿಗೊಳಿಸಿರುವ ನೋಟಿಸಿನಲ್ಲಿ ಯಾವುದೇ ಕಾನೂನಿನ ನಿಬಂದನೆ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಅರ್ಜಿದಾರರಿಗೆ ಬಂಧನ ಭೀತಿಯಿದೆ ಎಂದು ಅರ್ಜಿದಾರೆ ಪರ ವಕೀಲರು ವಾದಿಸಿದರು.
ಭವಾನಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಾಧ್ಯಮಗಳು ಬಿಂಬಿಸಿವೆ. ಎಸ್ ಐಟಿಯು ಮಾಧ್ಯಮಗಳು ಯಾವುದೇ ನೋಟಿಸ್ ಜಾರಿಗೊಳಿಸಿಲ್ಲ. ಆದರೆ ಮಾಧ್ಯಮಗಳ ವರದಿಯಂತೆ ತನಿಖಾ ಸಂಸ್ಥೆಯು ಬಂಧಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರುತ್ತಿರುವುದಾಗಿ ಅವರು ಹೇಳಿದ್ದಾರೆ.