ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರನ್ನು ಮಂಗಳೂರಿನ ಪಿವಿಎಸ್ ಸರ್ಕಲ್‌ನಿಂದ ಅಪಹರಿಸಿರುವ ಘಟನೆ ನಡೆದಿದೆ. ಕೇರಳದಿಂದ ಮಂಗಳೂರಿಗೆ ವ್ಯವಹಾರ ನಿಮಿತ್ತ ಬಂದಿದ್ದ ಉದ್ಯಮಿಯನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ 10 ಲಕ್ಷ ರೂ. ಬೇಡಿಕೆಯಿಟ್ಟಿದೆ.
ಮಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ. ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೀಟು ಮಾಡಿಸಿಕೊಡಲು ಕೇರಳದಿಂದ ಬಂದಿದ್ದ ಶರತ್ ಕೆಲಸ ಮುಗಿಸಿ, ಬೆಂಗಳೂರಿಗೆ ತೆರಳಲು ಮಂಗಳವಾರ ರಾತ್ರಿ ನಗರದ ಪಿವಿಎಸ್ ಬಳಿ ಬಸ್ಸು ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ಅವರನ್ನು ಬಲವಂತವಾಗಿ ಕಾರಿಗೆ ಹಾಕಿ ಅಪಹರಿಸಿದ್ದಾರೆ ಎನ್ನಲಾಗಿದೆ.
ಕಿಡ್ನಾಪರ್‌ಗಳು ಉದ್ಯಮಿಯ ಮನೆಯಯವರಿಗೆ ಫೋನ್ ಮಾಡಿ 10 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಶರತ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.