ರಾಮನಗರ: ಟ್ಯೂಷನ್ ಟೀಚರ್‌ನಿಂದಲೇ 10ನೇ ತರಗತಿ ವಿದ್ಯಾರ್ಥಿನಿಯ ಅಪಹರಣ ಆಗಿರುವ ಘಟನೆ ನಡೆದಿದ್ದು, ಕನಕಪುರ ಮೂಲದ ಬಾಲಕಿ ತಂದೆಯಿಂದ ಜೆ.ಪಿ.ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಕನಕಪುರ ಮೂಲದ ಅಭಿಷೇಕ್ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಟ್ಯೂಷನ್ ಟೀಚರ್. ಕಳೆದ ನ.23ರಂದು ಎಂದಿನಂತೆ ಆರೋಪಿ ಬಳಿ ಟ್ಯೂಷನ್‌ಗೆ ವಿದ್ಯಾರ್ಥಿನಿ ಬಂದಿದ್ದಳು. ಟ್ಯೂಷನ್ ಮುಗಿದು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನು ಟ್ಯೂಷನ್ ಟೀಚರ್ ಕರೆದೊಯ್ದಿರೋದು ತಿಳಿದು ಬಂದಿದೆ.
ಬಾಲಕಿಯನ್ನು ಕರೆದೊಯ್ಯುವ ವೇಳೆ ಮನೆಯ ರೂಂನಲ್ಲೇ ಮೊಬೈಲ್ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಕಳೆದ ನಲವತ್ತು ದಿನಗಳಿಂದ ಸಣ್ಣ ಸುಳಿವು ಸಿಗದಂತೆ ಅಪ್ರಾಪ್ತೆ ಜೊತೆ ತಲೆಮರೆಸಿಕೊಂಡಿದ್ದು, ಪೋನ್ ಬಳಕೆಯಾಗಲಿ, ಪೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿ ಆನ್ಲೈನ್ ಪೇಮೆಂಟ್ ಕೂಡ ಆರೋಪಿ ಮಾಡುತ್ತಿಲ್ಲ. ಕಳೆದ ನಲವತ್ತು ದಿನಗಳಿಂದ ಬೆಂಗಳೂರು ರಾಮನಗರ, ಕನಕಪುರ ಸೇರಿ ಹಲವು ಕಡೆ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ಘೋಷಿಸಲಾಗಿದೆ. ಅಲ್ಲದೆ, ಆರೋಪಿ ಪತ್ತೆಯಾಗದ ಹಿನ್ನೆಲೆ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.