Monday, February 10, 2025
Homeಮುಲ್ಕಿಕಿನ್ನಿಗೋಳಿ:ಫೆಬ್ರವರಿ 1-ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳೋತ್ಸವಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ...

ಕಿನ್ನಿಗೋಳಿ:ಫೆಬ್ರವರಿ 1-ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳೋತ್ಸವ
ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಉದ್ಘಾಟನೆ.

ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳೋತ್ಸವವು ಫೆಬ್ರವರಿ 1 ಶನಿವಾರ ಬೆಳಗ್ಗೆ 8:30ಕ್ಕೆ ಸರಿಯಾಗಿ ಐಕಳ ಬಾವ ಧರ್ಮ ಚಾವಡಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಹಿತಿ ನೀಡಿದರು .ಅವರು ಐಕಳ ಕಂಬಳದ ಮಂಜೊಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಂಬಳೋತ್ಸವವನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ಐಕಳ ಬಾವ ಕುಟುಂಬ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಕೆಪಿ ಕೆ ಹೆಗ್ಡೆ ವಹಿಸಲಿದ್ದಾರೆ.

ಕಂಬಳ ಕರೆಯನ್ನು ಅಧಾನಿ ಫೌಂಡೇಶನ್ ನ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಲಿದ್ದಾರೆ. ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ, ಕಿರೆಂ ಚರ್ಚ್ ನ ಧರ್ಮ ಗುರುಗಳಾದ ರೆ. ಫಾ.ಒಸ್ವಾಲ್ಡ್ ಮೊಂತೆರೋ ಆಶೀರ್ವಚನ ನೀಡಲಿದ್ದಾರೆ. ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ವಿಧಾನಸಭಾಧ್ಯಕ್ಷ ಯುಟಿ ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಎಮ್ ಆರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಡಾ. ಕೆ ಪ್ರಕಾಶ್ ಶೆಟ್ಟಿ, ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್ ಜಿ ಬಾಬುರಾವ್ ಸರ್ ನಾಯಕ್, ಸಂಸದ ಕ್ಯಾ. ಬ್ರಿಜೀಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮುಂಬೈ ಸಮಿತಿಯ ಕುಶಲ್ ಭಂಡಾರಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ಡಾ.ದೇವಿ ಪ್ರಸಾದ್ ಶೆಟ್ಟಿ ವಹಿಸಲಿದ್ದಾರೆ. ಕ್ರಿಕೆಟಿಗ ಹಾಗೂ ಖ್ಯಾತ ಕಮೆಂಟ್ರೇಟರ್ ರವಿಶಾಸ್ತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಚಲನಚಿತ್ರ ನಟರು ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದ ಸಾಧಕ ಹಾಗೂ ಕಂಬಳದ ಮಹಾ ಪೋಷಕರಾದ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರಿಗೆ ಸಹಕಾರಿ ವೀರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ತುಳುನಾಡ ಅಪ್ರತಿಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಅವರು ಮಾತನಾಡಿ ಕಂಬಳ ನಿಗದಿತ ಸಮಯಕ್ಕೆ ಮುಗಿಯಲು ಸಾಧಾನ್ಯತೆ ನೀಡಲಾಗಿದ್ದು ಕಂಬಳ ಕೋಣಗಳ ಯಜಮಾನರು ನಿಯಮಗಳನ್ನು ಪಾಲಿಸಬೇಕು ಮುಂಬೈನಲ್ಲಿ ಕಂಬಳ ನಡೆಸುವ ಯೋಜನೆಯಿದ್ದು ತಾಂತ್ರಿಕ ಕಾರಣಗಳಿಂದ ನಡೆಸಲಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳ ಸಮಿತಿಯ ಮುಂದಿನ ವರ್ಷ 50ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸುಮಾರು 55 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಸಹಿತ ವೇದಿಕೆ ನಿರ್ಮಾಣದ ಯೋಜನೆ ಹಾಗೂ ಐಕಳ ಕಾಂತಾ ಬಾರೆ ಬೂದಾ ಬಾರೆ ದೈವಸ್ಥಾನದ ಜೀರ್ಣೋದ್ಧಾರ ನಡೆಸಲಾಗುವುದು ಎಂದರು. ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ, ಸಮಿತಿಯ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಕಂಬಳ ಯಶಸ್ವಿಗೆ ಎಲ್ಲರ ಸಹಕಾರ ಬೇಕು ಎಂದರು. ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಮಾತನಾಡಿ ಗ್ರಾಮೀಣ ಭಾಗದ ಐಕಳ ಕಂಬಳ ರಸ್ತೆ ಅಗಲೀಕರಣ ಹಾಗೂ ಐಕಳದಂತಹ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜಕೀಯ ಪ್ರತಿನಿಧಿಗಳ ಸಹಕಾರ ಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಯೋಗೀಶ್ ರಾವ್, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ, ತೀರ್ಪುಗಾರ ವಿಜಯಕುಮಾರ್ ಕಂಗಿನ ಮನೆ, ಮುರಳಿಧರ ಶೆಟ್ಟಿ ಐಕಳ, ಇಲಿಯಾಸ್ ಸಾಂತಿಸ್, ಸುಕುಮಾರ ಭಂಡಾರಿ, ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ, ಸಾಯಿನಾಥ ಶೆಟ್ಟಿ ಮುಂಡ್ಕೂರು, ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಲೀಲಾ ದರ ಶೆಟ್ಟಿ, ಜಯಪಾಲ ಶೆಟ್ಟಿ, ಸಂಜೀವ ಶೆಟ್ಟಿ ಸ್ಥಳಂತ ಗುತ್ತು,ಹರೀಶ್ ಶೆಟ್ಟಿ ತಾಮಣಿಗುತ್ತು, ತಾರಾನಾಥ ಶೆಟ್ಟಿ,ದಯಾನಂದ ಶೆಟ್ಟಿ ಐಕಳ, ದಯೇಶ್ ಐಕಳ, ಶ್ರೀಶ ಸರಾಫ್ ಐಕಳ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular