ಕೇರಳದ ಕೊಲ್ಲಂನ ಕಡಕ್ಕಲ್‌ನಲ್ಲಿ ವಾಸವಿದ್ದ ದಂಪತಿಗಳು ಸೌದಿ ಅರೇಬಿಯಾದ ಅಲ್-ಖಾಸಿಮ್ ಪ್ರದೇಶದ ಬುರೈದಾಲ್ಲಿರುವ ಉನೈಜಾದಲ್ಲಿ ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ಕುಟುಂಬಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಸಾವಿನ ಹಿಂದಿರುವ ಕಾರಣ ಅಸ್ಪಷ್ಟವಾಗಿದೆ.ಮೃತರನ್ನು ಕಡಕ್ಕಲ್‌ನ ಮಣಿ ಎಂಬುವವರ ಪುತ್ರ ಶರತ್ (40) ಮತ್ತು ಅವರ ಪತ್ನಿ ಪ್ರೀತಿ (32) ಎಂದು ಗುರುತಿಸಲಾಗಿದೆ.
ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಶರಣ್ ಪತ್ತೆಯಾಗಿದ್ದರೆ, ಪತ್ನಿ ಪ್ರೀತಿ ಹಾಲ್ನ ನೆಲದ ಮೇಲೆ ಶವವಾಗಿ ಬಿದ್ದಿರುವುದು ತಿಳಿದುಬಂದಿದೆ. ಎಂದಿನಂತೆ ಕೆಲಸಕ್ಕೆ ಬರಬೇಕಿದ್ದ ಶರತ್, ಅಂದು ಬೆಳಗ್ಗೆ ಎಷ್ಟು ಹೊತ್ತಾದರೂ ಮನೆಯಿಂದ ಹೊರಬರದ ಹಿನ್ನಲೆ, ಅವರ ಸ್ನೇಹಿತ ಹಲವು ಬಾರಿ ದಂಪತಿಯ ಮನೆ ಬಾಗಿಲು ಬಡಿದಿದ್ದಾರೆ. ಯಾರು ಕೂಡ ಬಾಗಿಲನ್ನು ತೆರೆಯದ ಹಿನ್ನಲೆ, ಅನುಮಾನದಿಂದ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಈ ವೇಳೆ ಡೋರ್ನ ಹೊಡೆದು, ಮನೆಯೊಳಗೆ ಪ್ರವೇಶಿಸಿದ ಪೊಲೀಸರಿಗೆ ದಂಪತಿಯ ಮೃತದೇಹ ಕಂಡು ಅಚ್ಚರಿಯಾಗಿದೆ.
ಪತಿ ಮತ್ತು ಪತ್ನಿ ಶವವಾಗಿ ಪತ್ತೆಯಾಗಿದ್ದು, ಇಬ್ಬರು ಬೇರೆ ಬೇರೆ ಕೋಣೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಇದರ ಹಿಂದಿರುವ ಅಸಲಿ ಕಾರಣ ಏನು ಎಂಬುದು ಸದ್ಯದ ಮಟ್ಟಿಗೆ ಪೊಲೀಸರಿಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಯ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು, ಚುರುಕು ತನಿಖೆ ಕೈಗೊಂಡಿದ್ದಾರೆ. ಶರತ್ ಹಲವಾರು ವರ್ಷಗಳಿಂದ ಉನೈಜಾದಲ್ಲಿ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಪತ್ನಿ ಪ್ರೀತಿಯನ್ನು ಕೊಲ್ಲಂನಿಂದ ಸೌದಿ ಅರೇಬಿಯಾಕ್ಕೆ ಕರೆಸಿಕೊಂಡಿದ್ದರು ಎಂದು ಹೇಳಲಾಗಿದೆ.