ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬುಧವಾರ ತಡರಾತ್ರಿ ಕೃಷ್ಣಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಶಾಸಕ ಕೃಷ್ಣಮೂರ್ತಿ, ಅವರ ಆಪ್ತ ಸಹಾಯಕ ಚೇತನ್, ಚಾಲಕ ಸತೀಶ್ ಕಾರಿನಲ್ಲಿದ್ದರು. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.
ಕೊಳ್ಳೇಗಾಲದಿಂದ ಮೈಸೂರಿಗೆ ಅವರು ಪ್ರಯಾಣಿಸುತ್ತಿದ್ದರು. ನಾಡನಹಳ್ಳಿ ಬಳಿ ಕಾರಿನ ಟೈರ್ ಸಿಡಿದಿದೆ. ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆ ಬದಿಯ ಹಳ್ಳದತ್ತ ಸಾಗಿದೆ. ಆದರೆ ರಸ್ತೆ ಬದಿ ಸಣ್ಣ ಬಂಡೆಗಳಿದ್ದರಿಂದ ಕಾರು ಉರುಳಿ ಬೀಳುವುದನ್ನು ತಡೆದಿದೆ. ಕಾರು ಎಆರ್ ಕೆ ಪುತ್ರನ ಸ್ನೇಹಿತನದ್ದಾಗಿದ್ದು, ಹಿಂದಿನಿಂದ ಅವರ ಕಾರು ಬರುತ್ತಿತ್ತು. ಬಳಿಕ ಅವರು ತಮ್ಮ ಕಾರಿನಲ್ಲಿ ಮೈಸೂರಿನ ತಮ್ಮ ಮನೆಗೆ ತೆರಳಿದರು.