ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಜಾತ್ರಾ ಮಹೋತ್ಸವ ಮಾರ್ಚ್ 15 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಂಡಿತು, ಧ್ವಜಾರೋಹಣ, ಯಾಗ ಶಾಲೆ ಪ್ರವೇಶ, ಭೇರಿ ತಾಡನ, ಕೌತುಕ ಬಂಧನ ಹಾಗೂ ನಗರೋತ್ಸವ ಪ್ರತಿದಿನವೂ ಸಾನಿಧ್ಯದಲ್ಲಿ ಸಂಪನ್ನಗೊಂಡಿತು
ಮಾರ್ಚ 16 ರಿಂದ 21 ರವರೆಗೆ ಪ್ರತಿ ದಿನ ರಾತ್ರಿ ಮಯೂರ, ಡೋಲಾ, ಪುಷ್ಪಮಂಟಪ, ವೃಷಭ, ಗಜ, ಸಿಂಹ ವಾಹನೋತ್ಸವದ ಪುರಮೆರವಣಿಗೆ ಓಲಗ ಮಂಟಪದವರೆಗೂ ಸಂಭ್ರಮದಿಂದ ನಡೆಯಿತು. ಪ್ರತಿ ದಿನ ಸಂಜೆ ಕಟ್ಟೆ ಉತ್ಸವ, ಸ್ವರ್ಣಮುಖಿ ರಂಗ ಮಂದಿರದಲ್ಲಿ ದೇಶದ ವಿವಿಧ ಭಾಗದ ಕಲಾವಿದರುಗಳಿಂದ ಸೇವಾ ರೂಪದಲ್ಲಿ ವಿವಿಧ ಸಾಂಸ್ಕೃತಿಕ ವೈಭವಗಳು ಸಂಪನ್ನಗೊಳ್ಳುತ್ತಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಅವರು ಮಾತನಾಡಿ 22 ರಂದು ಬೆಳಗ್ಗೆ 11.15 ಕ್ಕೆ ರಥಾರೋಹಣ ಹಾಗೂ ಸಂಜೆ 4 ಕ್ಕೆ ರಥ ಅವರೋಹಣ ನಡೆಯಲಿದೆ. ಮಾ.23 ಕ್ಕೆ ಓಕುಳಿ ಉತ್ಸವ, ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದ್ದು, 24 ರಂದು ಬೆಳಗ್ಗೆ 7 ಕ್ಕೆ ಅಶ್ವಾರೋಹಣೋತ್ಸವದಲ್ಲಿ ಶ್ರೀದೇವಿಯನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಕುಳ್ಳಿರಿಸಿ, ಯಾಗ ಶಾಲೆಯಲ್ಲಿ ಶಾಂತಿ ತತ್ವ ಕಲಾಭಿವೃದ್ಧಿ ಹೋಮದ ಪೂರ್ಣಾಹುತಿ ನಡೆಸಲಾಗುವುದು ಎಂದರು. ದೇವಾಲಯ ಸುತ್ತಲೂ ಹೂವಿನ ಅಲಂಕಾರ ದೀಪಾಲಂಕಾರ ಎಲ್ಲೆಡೆ ಕಂಗೊಳಿಸುತ್ತಿತ್ತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ತಂತ್ರಿ ಕೆ.ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕ ನಾಯ್ಕ್, ಧನಾಕ್ಷಿ, ಸುಧಾ ಕೆ, ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ.ವಿ, ಯು.ರಾಜೇಶ್ ಕಾರಂತ್, ರಘುರಾಮ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಅರ್ಚಕರು, ಸಿಬ್ಬಂದಿ, ಭಕ್ತರು ಹಾಗೂ ಸ್ಥಳೀಯರ ಉಪಸ್ಥಿತರಿದ್ದರು.