ʼತುಳುನಾಡಿನ ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕಮರ್ಶಿಯಲ್ ಸಿನೆಮಾಗಳ ಜೊತೆಗೆ ಕಲಾತ್ಮಕ, ಬ್ರಿಜ್ ಮಾದರಿಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ನಟಿಸಿದ್ದ ‘ಟರ್ಬೊ’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿಗೆ ಅದು ಮೊದಲ ಮಲಯಾಳಂ ಸಿನಿಮಾ ಆಗಿತ್ತು. ಇದೀಗ ರಾಜ್ ಬಿ ಶೆಟ್ಟಿ ನಟಿಸಿರುವ ಮತ್ತೊಂದು ಮಲಯಾಳಂ ಸಿನಿಮಾ ಇಂದು (ಸೆಪ್ಟೆಂಬರ್ 13) ಸದ್ದಿಲ್ಲದೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ನಟಿಸಿರುವ ‘ಕೊಂಡಲ್’ ಹೆಸರಿನ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ನಾಲ್ಕು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದರೂ, ಟ್ರೆಂಡಿಂಗ್ನಲ್ಲಿದೆ. ಸಿನಿಮಾ ಮೀನುಗಾರರ ಕತೆ ಹೊಂದಿದ್ದು, ಸಿನಿಮಾದ ಬಹುತೇಕ ಕತೆ ಮೀನು ಹಿಡಿಯುವ ಬೋಟ್ನಲ್ಲಿ ನಡೆಯುತ್ತಿರುವಂತೆ ಟ್ರೈಲರ್ನಿಂದ ತೋರಿ ಬರುತ್ತಿದೆ. ಮೀನು ಹಿಡಿಯುವವರ ನಡುವಿನ ಸಂಘರ್ಷ, ಹೊಡೆದಾಟ, ತಂತ್ರ-ಕುತಂತ್ರ, ಅವರು ಎದುರಿಸುವ ಸವಾಲುಗಳು, ಅದನ್ನೆಲ್ಲ ಮೀರಿ ನಿಲ್ಲುವ ನಾಯಕ ಇನ್ನಿತರೆ ವಿಷಯಗಳು ಸಿನಿಮಾದ ಕತೆಯಲ್ಲಿರುವಂತಿದೆ.
ಸಿನಿಮಾದ ಟ್ರೈಲರ್ ಭರ್ಜರಿಯಾಗಿದೆ. ಸಿನಿಮಾವನ್ನು ಸುಂದರವಾಗಿ ಚಿತ್ರೀಕರಿಸುವುದು ಟ್ರೈಲರ್ನಲ್ಲಿ ತಿಳಿದು ಬರುತ್ತಿದೆ. ಟ್ರೈಲರ್ನ ಕೊನೆಯಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕೊನೆಯಲ್ಲಿ ಕಾಣಿಸಿಕೊಂಡರೂ ಸಹ ಅವರದ್ದು ಬಹಳ ಪ್ರಮುಖವಾದ ಪಾತ್ರ ಎಂಬುದು ಅವರ ಎಂಟ್ರಿಯಿಂದಲೇ ತಿಳಿದು ಬರುತ್ತಿದೆ. ಸಿನಿಮಾದಲ್ಲಿ ಆಂಟೊನಿ ವರ್ಗೀಸ್ ಪೆಪೆ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಅಜಿತ್ ಮಾಂಪಲ್ಲಿ, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಈ ಹಿಂದೆ, ‘ಬ್ಯಾಂಗಳೂರ್ ಡೇಸ್’, ‘ಮಿನ್ನಲ್ ಮುರಲಿ’, ‘ತಲ್ಲುಮಾಲ’, ‘ಆರ್ಡಿಎಕ್ಸ್’ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಣ ಸಂಸ್ಥೆ.
ರಾಜ್ ಬಿ ಶೆಟ್ಟಿ ನಟಿಸಿರುವ ಎರಡನೇ ಮಲಯಾಳಂ ಸಿನಿಮಾ ಇದಾಗಿದೆ. ಇತ್ತೀಚೆಗಷ್ಟೆ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅವರ ನೆಚ್ಚಿನ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ನಟಿಸುತ್ತಿರುವ ‘45’ ಸಿನಿಮಾದಲ್ಲಿ ಶೆಟ್ಟಿಯವರದ್ದು ಪ್ರಮುಖ ಪಾತ್ರ. ‘ರುಧಿರಂ’ ಸಿನಿಮಾದಲ್ಲಿಯೂ ಶೆಟ್ಟರು ನಟಿಸುತ್ತಿದ್ದಾರೆ.
ಟ್ರೈಲರ್ ವೀಕ್ಷಿಸಿ…