Monday, December 2, 2024
Homeತುಳು ಭಾಷೆಮುಲ್ಕಿ:ಕೊರಗ ಸಮುದಾಯದ ಧರಣಿ ಶಾಸಕರ ಮಧ್ಯಸ್ಥಿಕೆಯಿಂದ ಮುಕ್ತಾಯ

ಮುಲ್ಕಿ:ಕೊರಗ ಸಮುದಾಯದ ಧರಣಿ ಶಾಸಕರ ಮಧ್ಯಸ್ಥಿಕೆಯಿಂದ ಮುಕ್ತಾಯ

ಮುಲ್ಕಿ:ಕಳೆದ 3 ದಿನಗಳಿಂದ ಹಕ್ಕುಪತ್ರಕ್ಕಾಗಿ ಮೂಲ್ಕಿ ತಾಲೂಕು ಆಡಳಿತ ಸೌಧದ ಮುಂಭಾಗ ಟೆಂಟ್ ಹಾಕಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ 30 ಕೊರಗ ಕುಟುಂಬಗಳ ಸದಸ್ಯರು ಶಾಸಕ ಉಮಾನಾಥ ಎ.ಕೋಟ್ಯಾನ್ ಮಧ್ಯಸ್ಥಿಕೆಯಿಂದ ಶುಕ್ರವಾರ ಸಂಜೆ ಮುಕ್ತಾಯಗೊಳಿಸಿದ್ದಾರೆ.
ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ನೆತೃತ್ವದಲ್ಲಿ ಭೂಮಿಯ ಹಕ್ಕುಪತ್ರಕ್ಕಾಗಿ 30ಕೊರಗ ಕುಟುಂಬಗಳು ಸೆ.18ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಜಿಲ್ಲಾಡಳಿತ ಸಹಿತ ತಾಲೂಕು ತಹಶಿಲ್ದಾರರು, ಐಟಿಡಿಪಿ ಅಕಾರಿಗಳು ಧರಣಿ ನಿರತರ ಮನವೊಲಿಸಲು ಸತತ ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ.
ಶುಕ್ರವಾರ ಮಾಹಿತಿ ತಿಳಿದ ಶಾಸಕ ಉಮಾನಾಥ ಎ.ಕೋಟ್ಯಾನ್‌ರವರು ಧರಣಿ ನಿರತರ ಮನ ಒಲಿಕೆಗೆ ಪ್ರಯತ್ನಿಸಿದ್ದರು. ಕೊಲ್ಲೂರುಪದವು ಬಳಿ ಮಂಜೂರಾದ 7.04 ಎಕರೆ ಜಮೀನನ್ನು 3ತಿಂಗಳ ಒಳಗೆ ಸಮತಟ್ಟುಗೊಳಿಸಿ ಎಲ್ಲ 30 ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಮನೆ ಕಟ್ಟಿಕೊಡಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ಅಶ್ವಾಸನೆ ನೀಡಿದರು. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ತಕ್ಷಣ ಯಾವುದೇ ಆಶ್ವಾಸನೆ ನೀಡಲಾಗದು ಎಂದವರು ಹೇಳಿದರು.
ಅರಂಭದಲ್ಲಿ ಶಾಸಕರ ಮನವಿಯನ್ನು ತಿರಸ್ಕರಿಸಿ ಹಕ್ಕುಪತ್ರ ದೊರೆಯಲು ಎಷ್ಟೇ ಸಮಯವಾದರೂ ಚಿಂತಿಲ್ಲ. ನಾವು ಅಲ್ಲಿತನಕ ಧರಣಿ ಮುಂದುವರಿಸುತ್ತೇವೆ ಎಂದು ಧರಣಿ ನಿರತರು ಉತ್ತರಿಸಿದರು.
ಈ ಹಿಂದೆಯೂ ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಸತಾಯಿಸಿದ್ದಾರೆ. ಕಷ್ಟಜೀವಿಗಳಾದ ನಾವು ಮನೆ ಕೊಡುವವರೆಗೆ ಕಷ್ಟದಲ್ಲೇ ಇರುತ್ತೇವೆ ಎಂದು ಅವರು ಹೇಳಿದರು.
ಸತತ ಪ್ರಯತ್ನದ ಬಳಿಕ 3 ತಿಂಗಳೊಳಗೆ ಹಕ್ಕುಪತ್ರ ದೊರೆಯದಿದ್ದಲ್ಲಿ ತನ್ನ ಮನೆ ಮುಂದೆನೇ ಧರಣಿ ನಡೆಸಿ ಎಂದು ತಿಳಿಸಿದ ಬಳಿಕ ಶಾಸಕರ ಮನವಿಗೆ ಪುರಸ್ಕರಿಸಿ ಎಲ್ಲಾ ಕುಟುಂಬಗಳು ಪ್ರತ್ಯೇಕ ಸಭೆ ನಡೆಸಿ ಧರಣಿ ಮುಕ್ತಾಯಕ್ಕೆ ಸಮ್ಮತಿಸಿದರು.ಈ ಸಂದರ್ಭ ಮಾಧ್ಯಮ ಜತೆಗೆ ಮಾತನಾಡಿದ ಕೆ.ಪುತ್ರನ್, ಶಾಸಕರ ಮನವಿಗೆ ಪುರಸ್ಕಾರ ನೀಡಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಭಿವೃದ್ಧಿಗೆ ತೊಡಕಗಿದೆ. ಚುನಾವಣೆ ಮುಗಿದ ತಕ್ಷಣ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಮ್ಮ ಧರಣಿಯನ್ನು ಮುಂದೂಡುತ್ತಿದ್ದೇವೆ. ಚುನಾವಣೆ ಮುಗಿದ ತಕ್ಷಣ ಶಾಸಕರ ಬಳಿಗೆ ತೆರಳಿ ನಮ್ಮ ಸಮಸ್ಯೆಗೆ ಬಗ್ಗೆ ಮಾತನಾಡುತ್ತೇವೆ. ಬಳಿಕವೂ ನಮ್ಮ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ನಮ್ಮ ಆಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಎಂದರು.
ಪ್ರಮುಖರಾದ ಸುನಿಲ್ ಆಳ್ವ, ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಪುತ್ತುಬಾವ, ವಿಠಲ ಎನ್.ಎಂ, ಪ್ರಶಾಂತ್ ಬಸವರಾಜ್ ಜಾಂಬೂರ, ಸುನಿಲ್ ಇಟಗ, ಪ್ರಶಾಂತ್, ಶ್ಯಾಂಪ್ರಸಾದ್ ಪಡುಪಣಂಬೂರು, ಧರಣಿ ನಿರತರ ಪೈಕಿ, ಸುಂದರ ಗುತ್ತಕಾಡು, ಕೆ.ಪುತ್ರನ್, ಸುಶೀಲಾ, ನರಸಿಂಹ, ಸುಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular