ಮಂಗಳೂರು: ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ನಡಿ ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನೆಮಾದ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಸಿದ್ಧಗೊಂಡಿದೆ. ಕೊರಗಜ್ಜ ದೈವದ ಕಾರ್ಣಿಕ, ಪಾವಿತ್ರ್ಯತೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿ ಇದನ್ನು ರಚಿಸಲಾಗಿದೆ. ಈ ವಿಷಯವಾಗಿ ಕೊರಗಜ್ಜ, ಕಲ್ಲುರ್ಟಿ, ಗುಳಿಗ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಶೇಷ ಕೋಲಸೇವೆ ನೀಡಿ, ಅದೇ ಸಮಯದಲ್ಲಿ ಶ್ರೀ ದೈವಗಳ ಸಮಕ್ಷಮದಲ್ಲಿ ಒಪ್ಪಿಗೆಗಾಗಿ ಚಿತ್ರದ ಫಸ್ಟ್ ಲುಕ್ ಪ್ರದರ್ಶಿಸಿದರು. ಸಾರ್ವಜನಿಕವಾಗಿ ಫಸ್ಟ್ ಲುಕ್ ಬಿಡುಗಡೆಗೊಳಿಸಲು ಶ್ರೀ ದೈವಗಳಿಂದ ಭಯ ಭಕ್ತಿಯಿಂದ ಬೇಡಿಕೊಂಡು ಒಪ್ಪಿಗೆ ಪಡೆಯಲಾಯಿತು.
ಆದರೆ ಎಲ್ಲೆಂದರಲ್ಲಿ ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಅನ್ನು ದೈವಕ್ಕೆ ಅಪಚಾರವಾಗುವ ರೀತಿ ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.
ಚಿತ್ರ ತಂಡವು ಪ್ರತಿ ಹಂತದಲ್ಲೂ ಕೊರಗಜ್ಜ ಮತ್ತು ಶ್ರೀ ದೈವಗಳ ಆಶೀರ್ವಾದ ಪಡೆದೇ ಮುಂದಡಿ ಇಡುತ್ತಿರುವುದು ವಿಶೇಷ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ಖ್ಯಾತ ಕಲಾವಿದೆ ಭವ್ಯ ಅದಿತಿ, ಎಡಿಟರ್ ವಿದ್ಯಾಧರ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ, ಕಮಲಿನಿ ಹಾಗೂ ಚಿತ್ರ ತಂಡದ ಬಹುತೇಕರು ಉಪಸ್ಥಿತರಿದ್ದರು.