ಚಿಕ್ಕಮಗಳೂರು: ಉತ್ತರ ಕನ್ನಡದ ಶಿರೂರು, ಕೇರಳದ ವಯನಾಡು ಭೂ ಕುಸಿತದ ಬೆನ್ನಲ್ಲೇ ಹೈ ಅಲರ್ಟ್ ಆಗಿರುವ ಚಿಕ್ಕಮಗಳೂರು ಜಿಲ್ಲಾಡಳಿತ, ಚಾರ್ಮಾಡಿ ಘಾಟಿ ಬಳಿ ಡಿ.ಆರ್. ತುಕಡಿಯನ್ನು ನಿಯೋಜಿಸಿದೆ. ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ಸಿಬ್ಬಂದಿಯನ್ನು ಸನ್ನದ್ಧಗೊಳಿಸಿಡಲಾಗಿದೆ. ಚಾರ್ಮಾಡಿ ಘಾಟಿ ಆರಂಭದ ಸ್ಥಳವಾದ ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಬಳಿ ಡಿ.ಆರ್. ತುಕಡಿಯನ್ನು ನಿಯೋಜಿಸಲಾಗಿದೆ.
ಸತತ ಮಳೆಯಿಂದ ಚಿಕ್ಕಮಗಳೂರು-ಮಂಗಳೂರು ರಸ್ತೆಯಾದ ಚಾರ್ಮಾಡಿ ಘಾಟಿಯಲ್ಲಿ ಯಾವಾಗ ಬೇಕಾದರೂ, ಏನೇ ದುರಂತ ಸಂಭವಿಸಬಹುದು ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕೇರಳದ ವಯನಾಡು ದುರಂತದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಆತಂಕ ಎದುರಾಗಿದೆ. ಶಿರಾಡಿ ಘಾಟಿಯಲ್ಲಿ ಆಗಾಗ ಭೂ ಕುಸಿತ ಸಂಭವಿಸುತ್ತಿದೆ. ಹೀಗಾಗಿ ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೆ, ಕೆಲವೆಡೆ ಚಾರ್ಮಾಡಿ ಘಾಟಿಯಲ್ಲೂ ಬಿರುಕು ಬಿಟ್ಟಿದೆ. ಆದುದರಿಂದ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಡಿ.ಆರ್. ತುಕಡಿಯಲ್ಲಿ ಅಧಿಕಾರಿ ಸಹಿತ ಸಿಬ್ಬಂದಿ ಇದ್ದಾರೆ. ಯಾವುದೇ ಅಪಾಯ ಸಂಭವಿಸಿದ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಅವರು ಧಾವಿಸಲಿದ್ದಾರೆ ಮತ್ತು ಹೆಚ್ಚಿನ ನೆರವು ಬೇಕಾದಲ್ಲಿ ಜಿಲ್ಲಾಡಳಿತವನ್ನು ಎಚ್ಚರಿಸಲಿದ್ದಾರೆ.