ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ನಡುವೆ ಸರ್ಕಾರಿ ಬಸ್ಸು ಸಂಚಾರಕ್ಕಿದ್ದ ತೊಡಕು ನಿವಾರವಣೆಯಾಗಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್ಸು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕೋರ್ಟ್ ಆದೇಶ ನೀಡಿದೆ ಎಂದು ವರದಿಗಳು ತಿಳಿಸಿವೆ. ಮಂಗಳೂರು-ಮೂಡುಬಿದಿರೆ ಮಾರ್ಗದ ಗುರುಪುರ ಸೇತುವೆ ನಿರ್ಮಾಣದ ಬಳಿಕ ಮಂಗಳೂರು ಮೂಡುಬಿದಿರೆ ಪ್ರಯಾಣಿಸುವ ಎಂಟು ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಜಿಲ್ಲಾಡಳಿತದಿಂದ ಪರವಾನಗಿ ತಡೆಹಿಡಿಯಲಾಗಿತ್ತು.
ಈ ಹಿಂದೆ ಗುರುಪುರ ಹಳೆ ಸೇತುವೆ ದುರ್ಬಲವಾಗಿದೆ ಎಂದು ಕೆಎಸ್‌ಆರ್‌ಟಿಸಿ ಬಸ್ಸಿಗೆ ನೀಡಲಾಗಿದ್ದ ಪರವಾನಗಿ ತಡೆಹಿಡಿಯಲಾಗಿತ್ತು. ಹೊಸ ಸೇತುವೆ ನಿರ್ಮಾಣ ಅಥವಾ ಹಳೆ ಸೇತುವೆ ದುರಸ್ತಿ ಬಳಿಕ ಕೆಎಸ್ಸಾರ್ಟಿಸಿ ಬಸುಗಳಿಗೆ ಪರವಾನಗಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಹೊಸ ಸೇತುವೆ ನಿರ್ಮಾಣವಾದ ಬಳಿಕ ಕೆಎಸ್ಸಾರ್ಟಿಸಿ 56 ಟ್ರಿಪ್‌ಗಳ ಕೋರಿಕೆ ಮಂಡಿಸಿತ್ತು. ಆದರೆ 24 ಟ್ರಿಪ್ ಓಡಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಅದರ ವಿರುದ್ಧ ಕೆಎಸ್ಸಾರ್ಟಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಪ್ರಸ್ತುತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಜಂಟಿ ಸಮಿತಿಯ ನಿರ್ಣಯವನ್ನು ಅಸಿಂಧುಗೊಳಿಸಿ, ಕೆಎಸ್ಸಾರ್ಟಿಸಿಯ ಎಂಟು ಬಸ್ಸುಗಳಿಗೆ 56 ಟ್ರಿಪ್ ಓಡಿಸಲು ಪರವಾನಗಿ ನೀಡುವಂತೆ ಸಮಿತಿಗೆ ಆದೇಶ ನೀಡಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಂದಿನ ತಿಂಗಳ ಬಳಿಕ ಸಮಿತಿಯಿಂದ ಕೆಎಸ್‌ಆರ್‌ಟಿಸಿಗೆ ಪರವಾನಗಿ ಲಭಿಸುವ ಸಾಧ್ಯತೆ ಇದೆ.
ಮಂಗಳೂರು-ಮೂಡುಬಿದಿರೆ ನಡುವೆ ಎಂಟು ಬಸ್ಸುಗಳಿಗೆ 6 ಟ್ರಿಪ್ ಓಡಿಸಲು ಕೆಎಸ್ಸಾರ್ಟಿಸಿ ಪರವಾನಗಿ ಕೇಳಿತ್ತು. ಆದರೆ 24 ಟ್ರಿಪ್‌ಗಳಿಗಷ್ಟೇ ಅನುಮತಿ ನೀಡಿತ್ತು. ಈ ನಿರ್ಧಾರದ ವಿರುದ್ಧ ಕೆಎಸ್ಸಾರ್ಟಿಸಿ ಕೋರ್ಟ್ ಮೊರೆ ಹೋಗಿತ್ತು. ಪ್ರಸ್ತುತ ನ್ಯಾಯಾಲಯವೇ ಈ ರೂಟ್‌ನಲ್ಲಿ ಸರ್ಕಾರಿ ಬಸ್ಸು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಆದೇಶಿಸಿದ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ.
ಶೀಘ್ರದಲ್ಲೇ ಮಂಗಳೂರು-ಮೂಡುಬಿದಿರೆ ಸರ್ಕಾರಿ ಬಸ್ಸು | 56 ಟ್ರಿಪ್ ಕೆಎಸ್ಸಾರ್ಟಿಸಿ ಬಸ್ಸು ಓಡಿಸಲು ನ್ಯಾಯಾಲಯದ ಆದೇಶ
RELATED ARTICLES