ಬೆಳಗಾವಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬವಾದುದಕ್ಕೆ ಸಾರಿಗೆ ಇಲಾಖೆಯ ಬಸ್ಸನ್ನು ಕೋರ್ಟ್ ಆದೇಶದಂತೆ ಜಪ್ತಿ ಮಾಡಲಾಗಿದೆ. ಅಪಘಾತದಲ್ಲಿ ಮೃತರಾದವರಿಗೆ 15 ಲಕ್ಷ ರೂ. ಪರಿಹಾರ ನೀಡುವಂತೆ ಈ ಹಿಂದೆ ಕೋರ್ಟ್ ಆದೇಶಿಸಿತ್ತು. ಆದೇಶ ನೀಡಿ ಐದು ವರ್ಷ ಕಳೆದರೂ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಬಸ್ಸನ್ನು ಜಪ್ತಿ ಮಾಡುವಂತೆ ಕೂಡ್ಲಿಗಿ ತಾಲೂಕು ನ್ಯಾಯಾಲಯ ಆದೇಶಿಸಿತ್ತು.
ಹೀಗಾಗಿ ಇದೀಗ ಅಧಿಕಾರಿಗಳು ಬಸ್ಸನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 2019ರಲ್ಲಿ ಕೂಡ್ಲಿಗಿಯ ಗೋವಿಂದಗಿರಿ ಗ್ರಾಮದ ಬಳಿ ದಾವಣಗೆರೆ ಡಿಪೋಗೆ ಸೇರಿದ ಸಾರಿಗೆ ಬಸ್ ಮಾರೆಪ್ಪ ಎಂಬರಿಗೆ ಡಿಕ್ಕಿ ಹೊಡೆದು, ಅವರ ಸಾವಿಗೆ ಕಾರಣವಾಗಿತ್ತು. ಈ ಸಂಬಂಧ ಪರಿಹಾರಕ್ಕಾಗಿ ವಕೀಲ ಜಿ. ಸೀತಾರಾಮ್ ದಾವೆ ಹೂಡಿದ್ದರು.