Monday, January 20, 2025
Homeಸುಬ್ರಹ್ಮಣ್ಯಕುಕ್ಕೆ: ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ

ಕುಕ್ಕೆ: ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಎಸ್.ಪಿ.ವೈ.ಎಸ್.ಎಸ್.ಕರ್ನಾಟಕ, ನೇತ್ರಾವತಿ ವಲಯ ಕಡಬ ತಾಲೂಕು, ಶ್ರೀಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು. ಶ್ರೀ ಪತಂಜಲಿ ಯೋಗ ಅಧ್ಯಾಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ಮತ್ತು ಮೈಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ರವಿವಾರ ಮುಂಜಾನೆ ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾ‌ರ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭ, ಅನುಗ್ರಹ ಎಜುಕೇಶನ್‌ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್. ಎನ್. ವೈ.ಎಸ್.ಎಸ್‌ನ ಜಿಲ್ಲಾ ಸಂಚಾಲಕಿ ಮಾಧುರಿ, ಜಿಲ್ಲಾ ಸಂಚಾಲಕ ನಾರಾಯಣ ಶಿಬರಾಯ, ನೇತ್ರಾವತಿ ವಲಯ ಸಂಚಾಲಕ ಅಶೋಕ ಜೈನ್, ಪುತ್ತೂರು ನಗರ ಸಂಚಾಲಕ ಕೃಷ್ಣಾನಂದ ನಾಯಕ್, ಕಾಸರಗೋಡು ಸಂಚಾಲಕ ಶೈಲೇಶ್ ಕಾಸರಗೋಡು ಇದ್ದರು.

ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ರಾಜ್ಯ ಮತ್ತು ಅಂತರ್‌ರಾಜ್ಯಗಳಿಂದ ಆಗಮಿಸಿದ ಯೋಗಬಂಧುಗಳು ಮುಂಜಾನೆ ಷಣ್ಮುಖ ನಮಸ್ಕಾರ ಮಾಡಿದರು. ಪ್ರಾತಃಕಾಲ 4.30ರಿಂದ 7ರ ವರೆಗೆ ಯೋಗ ಕಾರ್ಯಕ್ರಮ ನಡೆಯಿತು. ಮೂರು ಹಂತದಲ್ಲಿ ಮತ್ತು ಆರು ಸುತ್ತಿನಲ್ಲಿ ಯೋಗ ಷಣ್ಮುಖ ನಮಸ್ಕಾರವನ್ನು ತಾಲೂಕು ಶಿಕ್ಷಣ ಪ್ರಮುಖ ವಸಂತ ಅವರ ನೇತೃತ್ವದಲ್ಲಿ ನಡೆಯಿತು. ಯೋಗ ಶಿಕ್ಷಕರಾದ ರಾಜೇಶ್ ಪುತ್ತೂರು, ನಿಶಿತಾ ಸುಳ್ಯ, ಹೇಮಚಂದ್ರ ಪುತ್ತೂರು ಇವರಳ ಪ್ರಾತ್ಯಕ್ಷಿಕೆಯೊಂದಿಗೆ ಯೋಗ ಷಣ್ಮುಖ ನಮಸ್ಕಾರ ಮಾಡಿಸಿದರು.

ಕಾರ್ಯಕ್ರಮಕ್ಕೆ ಕರ್ನಾಟಕ ಮತ್ತು ಕೇರಳ ರಾಜ್ಯದಿಂದ ಯೋಗಪಟುಗಳು ಆಗಮಿಸಿದ್ದರು. ದಾವಣಗೆರೆ, ತುಮಕೂರು, ಹಾಸನ, ಕಾಸರಗೋಡು, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಉಡುಪಿ, ಸುಳ್ಯ , ಮಂಗಳೂರು, ಸುರತ್ಕಲ್, ಮೂಲ್ಕಿ, ಪುತ್ತೂರು, ಬಂಟ್ವಾಳ, ವಿಟ್ಲ, ಮಂಜೇಶ್ವರ, ಪೊಳಲಿ, ಉಳ್ಳಾಲ, ಕಲ್ಲಡ್ಕ ಸೇರಿದಂತೆ ವಿವಿಧೆಡೆಗಳ ಸುಮಾರು ಮೂರು ಸಾವಿರಕ್ಕೂ ಅಧಿಕ ಯೋಗಪಟುಗಳು, ಸಾರ್ವಜನಿಕರೊಂದಿಗೆ ಭಾಗವಹಿಸಿ ಯೋಗ ಷಣ್ಮುಖ ನಮಸ್ಕಾರ ಮಾಡಿದರು. ವಿಟ್ಲದ ಯೋಗ ಶಿಕ್ಷಕ ಮಂಜುನಾಥ್ ಯೋಗ ಷಣ್ಮುಖ ನಮಸ್ಕಾರದ ಮಹತ್ವ ತಿಳಿಸಿದರು. ಯೋಗ ಶಿಕ್ಷಕ ಹರಿಪ್ರಸಾದ್ ಅಮೃತಾಸನ ನಡೆಸಿಕೊಟ್ಟರು. ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರವನ್ನು ಯೋಗ ಶಿಕ್ಷಕಿ ಸೌಮ್ಯ ವಿವರಿಸಿದರು.ಕಾರ್ಯಕ್ರಮದ ಸಂಯೋಜಕ ಪ್ರಭಾಕರ ಪಡೆ ವಂದಿಸಿದರು. ಯೋಗ ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು.

RELATED ARTICLES
- Advertisment -
Google search engine

Most Popular