ಪುತ್ತೂರು: ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನಡೆಯಲ್ಪಡುವ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ೨೦೨೪ಕ್ಕೆ ಪುತ್ತೂರಿನ ಬಹುಮುಖ ಪ್ರತಿಭೆ ಕುಮಾರಿ ಜ್ಞಾನ ರೈ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಹುಮುಖ ಪ್ರತಿಭೆ ಜ್ಞಾನ ರೈ, ಪುತ್ತೂರು ತಾಲೂಕು ಕುರಿಯ ಗ್ರಾಮದ ನಿವಾಸಿಯಾಗಿರುವ ಉದ್ಯಮಿ ಜಯರಾಮ್ ರೈ ಹಾಗೂ ಟಿವಿ ನಿರೂಪಕಿ ಹೇಮಾ ಜಯರಾಮ್ ರೈ ದಂಪತಿಯ ಪುತ್ರಿ.
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿರುವ ಇವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಸಂಗೀತ, ನೃತ್ಯ,ಯೋಗ, ಕರಾಟೆ, ಅಭಿನಯ ಚಿತ್ರಕಲೆ, ನಿರೂಪಣೆ ಮುಂತಾದ ವಿವಿಧ ಕಲಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಟನೆಯಲ್ಲೂ ಸೈನಿಸಿಕೊಂಡಿರುವ ಜ್ಞಾನ ರೈ ಯವರು ಸಾಮಾಜಿಕ ಕಳಕಳಿ ಸಾರುವ ನಿಸ್ವಾರ್ಥ, ನಿರಾಕರಣ, ಗೇನದಾಂತಿ ಉಡಲ್ ಎನ್ನುವ ಕಿರುಚಿತ್ರಗಳಲಿ ನಟಿಸಿ ಉತ್ತಮ ಬಾಲನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಿರ್ದುದ ಕಂಬಳ, ಹಾಗೂ ತೆಲುಗಿನ ಒಕ್ಕಟ್ಟೆ ಆಶಾ, ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ಭವಿಷ್ಯದಲ್ಲಿ ತಾನೊಬ್ಬ ಉತ್ತಮ ನಟಿಯಾಗುವ ಭರವಸೆಯನ್ನು ಮೂಡಿಸಿದ್ದಾರೆ. ಜಾಹೀರಾತಿನಲ್ಲೂ ರೂಪದರ್ಶಿಯಾಗಿ ಮಿಂಚಿರುವ ಇವರು ಹಲವಾರು ಆಲ್ಬಮ್ ಸಾಂಗ್ ಗಳಲ್ಲಿ ನಟಿಸಿ ತನ್ನ ನೃತ್ಯ ಹಾಗೂ ಅಭಿನಯದ ಮೂಲಕ ಗಮನ ಸೆಳೆದಿರುತ್ತಾರೆ.
ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ 500ಕ್ಕೂ ಅಧಿಕ ಧಾರ್ಮಿಕ, ಸಾಂಸ್ಕೃತಿಕ ವೇದಿಕೆಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ನೃತ್ಯ ಪ್ರದರ್ಶನವನ್ನು ನೀಡಿರುವ ಇವರು, ಕರಾಟೆಯಲ್ಲಿ ಬ್ಲೂ ಬೆಲ್ಟ್ ನ್ನು ಹೊಂದಿದ್ದು ಕರಾಟೆ ಸ್ಪರ್ಧೆಯಲ್ಲಿ ತಾಲೂಕು ಹಾಗೂ ಜಿಲ್ಲೆಯನ್ನು ಪ್ರತಿನಿಧಿಸಿರುತ್ತಾರೆ. ತಾಲೂಕು ಜಿಲ್ಲೆ ಹಾಗೂ ಅಂತರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.
‘ಬುಲ್ ಬುಲ್ ವಿಂಗ್’ ನ ‘ಗೋಲ್ಡನ್ ಆರೋ ‘ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ಕರ್ನಾಟಕದಿಂದ ಆಯ್ಕೆಯಾದ 50 ವಿದ್ಯಾರ್ಥಿಗಳಲ್ಲಿ ಇವರು ಒಬ್ಬರಾಗಿರುತ್ತಾರೆ. ರಾಜ್ಯಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ವಿಜೇತೆಯಾಗಿರುವ ಇವರು, ದೈಜಿ ವಲ್ಡ್ ವಾಹಿನಿ ಆಯೋಜಿಸಿದ್ದ ಜೂನಿಯರ್ ಸೆಲೆಬ್ರಿಟಿ ರಿಯಾಲಿಟಿ ಶೋನಲ್ಲಿ ಸೆಮಿ ಫೈನಲ್ ಹಂತವನ್ನು ತಲುಪಿರುತ್ತಾರೆ. ಮಕ್ಕಳ ದಿನಾಚರಣೆಯ ಪ್ರಯುಕ್ತ ಸುದ್ದಿ ವಾಹಿನಿಯಲ್ಲಿ ನಿರರ್ಗಳವಾಗಿ ಸುದ್ದಿ ಓದುವ ಮೂಲಕ ಉತ್ತಮ ಸುದ್ದಿ ವಾಚಕಿಯಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಕರೋನಾ ಸಮಯದಲ್ಲಿ ಹಲವಾರು ಸಂಘ-ಸಂಸ್ಥೆಗಳು ಆನ್ಲೈನ್ ಮೂಲಕ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಹಲವಾರು ಫೋಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತೆಯಾಗಿರುತ್ತಾರೆ.
ಇವರು ವಿವಿಧ ಕಲಾ ಪ್ರಕಾರಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಕೂಡ್ಲಿಗಿಯ ಶಶಿಧರ್ ಗುರೂಜಿ ಇವರಿಂದ ಧಾರ್ಮಿಕ ಪಠಣ, ನಿತ್ಯ ಶ್ಲೋಕಗಳು, ಭಗವದ್ಗೀತಾ ಪಠಣ, ಸಂಸ್ಕಾರ, ಗಾಂಧಾರಿ ವಿದ್ಯೆ, ಅಬಾಕಸ್ ಮುಂತಾದ ಶಿಕ್ಷಣವನ್ನು ಪಡೆದುಕೊಂಡಿರುತ್ತಾರೆ.
ವೈಷ್ಣವಿ ನಾಟ್ಯಾಲಯ ಪುತ್ತೂರು ಇಲ್ಲಿ ಭರತನಾಟ್ಯವನ್ನು ಅಭ್ಯಾಸಿಸುತ್ತಿರುವ ಇವರು ಯೋಗೀಶ್ವರಿ ಜಯಪ್ರಕಾಶ್ ಇವರ ಶಿಷ್ಯೆಯಾಗಿದ್ದು ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಮುಗಿಸಿರುತ್ತಾರೆ. ಬಹುಮುಖ ಪ್ರತಿಭೆ ಜ್ಞಾನ ರೈ ಅವರ ಪ್ರತಿಭೆಗೆ 2024ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಒದಗಿ ಬಂದಿರುತ್ತದೆ ಎನ್ನುವುದು ಹೆಮ್ಮೆಯ ವಿಚಾರ.
ಇವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ-ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಸ್ವಾಮಿ ವಿವೇಕಾನಂದ ಸದ್ಭಾವನ ಪ್ರಶಸ್ತಿ, ಸಿದ್ದಗಂಗಾ ಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ವಿಶ್ವಧರ್ಮಿ ಬಸವಣ್ಣ ಪ್ರಶಸ್ತಿ, ಖಗೋಳ ವಿಜ್ಞಾನಿ ಆರ್ಯಭಟ್ಟ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಗಮಕ ಗಾಯಕ ಗಾರುಡಿಗ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ವಿಜಯ ಸಂಕಲ್ಪ ಪ್ರಶಸ್ತಿ, ನಾಟ್ಯ ಮಯೂರಿ ಪ್ರಶಸ್ತಿ, ಪ್ರತಿಭಾ ರತ್ನ ಪ್ರಶಸ್ತಿ, ಪ್ರತಿಭಾ ಸಿರಿ ಪ್ರಶಸ್ತಿ, ಪ್ರತಿಭಾ ದೀಪ ಪ್ರಶಸ್ತಿ, ಕರುನಾಡ ತಾರೆ ಪ್ರಶಸ್ತಿ, ಕಲಾ ಚೈತನ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಗಡಿನಾಡ ರತ್ನ ಪ್ರಶಸ್ತಿ, ಕರುನಾಡ ಸಿರಿ ಪ್ರಶಸ್ತಿ, ರಾಜ್ಯ ವಿಭೂಷಣ ಪ್ರಶಸ್ತಿ, ವಿಜಯ ಸಂಕಲ್ಪ ಪ್ರಶಸ್ತಿ, ಕರ್ನಾಟಕ ನೃತ್ಯ ಶ್ರೀ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಪ್ರತಿಭೆಗೆ ಸಂದಿರುತ್ತವೆ.