ಕುಂದಾಪುರ: ಇಲ್ಲಿನ ಬೊಬ್ಬರ್ಯನಕಟ್ಟೆ ಎದುರಿನ ಮೇಲ್ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಕಾರು ಮೇಲ್ಸೇತುವೆಯಿಂದ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಗೆ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ ದಂಪತಿ ಸಾವನ್ನಪ್ಪಿದ್ದು, ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳದ ಕಣ್ಣೂರು ಮೂಲದ 49ರ ಹರೆಯದ ಮುನ್ನಾವರ್, ಅವರ 41ರ ಹರೆಯದ ಪತ್ನಿ ಸಮೀರ ಮೃತರು ಎಂದು ಗುರುತಿಸಲಾಗಿದೆ. ಅವರ ಪುತ್ರ 18ರ ಹರೆಯದ ಸುಹೇಲ್ ಗಂಭೀರ ಗಾಯಗೊಂಡಿದ್ದಾನೆ. ಪ್ರಾಣಾಪಾಯದಿಂದ ಪಾರಾಗಿರುವ ಆತ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮುನ್ನಾವರ್ ಕುಟುಂಬ ಕೊಲ್ಲಾಪುರದಿಂದ ಕೇರಳದ ಕಣ್ಣೂರಿಗೆ ಪ್ರಯಾಣಿಸುತ್ತಿತ್ತು. ಸಮೀರ ಅವರ ಕುಟುಂಬ ಕಣ್ಣೂರು ಮೂಲದ್ದಾದುದರಿಂದ ಅವರು ಕಣ್ಣೂರಿಗೆ ಪ್ರಯಾಣಿಸುತ್ತಿದ್ದರು, ಮರಣೋತ್ತರ ಪರೀಕ್ಷೆ ಬಳಿಕ ಮೃತರ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.