ಭೀಮಸೇತು ಮುನಿವೃಂದ ಸಂಸ್ಥಾನ (ಶ್ರೀಮದ್ ಅಚ್ಯುತ ಪ್ರೇಕ್ಷಾಚಾರ್ಯ ಮಹಾ ಸಂಸ್ಥಾನಮ್) ಇಲ್ಲಿನ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ರಘುವರೇಂದ್ರ ತೀರ್ಥರ ಅಪ್ಪಣೆಯಂತೆ ಉಡುಪಿ ಎಂಜಿಎಂ ಕಾಲೇಜಿನ ಗಣಕಯಂತ್ರ ವಿಭಾಗದ ಉಪನ್ಯಾಸಕರಾದ ರಾಜಮೂರ್ತಿಯವರ ಮಾಹಿತಿಯ ಮೇರೆಗೆ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ-ಉಡುಪಿ ಇದರ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಇವರ ಮಾರ್ಗದರ್ಶನದಡಿಯಲ್ಲಿ ಎಂ ಎಸ್ ಆರ್ ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನೂಜೀ ಮಠದಲ್ಲಿನ ಶಾಸನವನ್ನು ಅಧ್ಯಯನ ಮಾಡಿರುತ್ತಾರೆ.
ಸಂಪೂರ್ಣವಾಗಿ ಭೂಮಿಯಲ್ಲಿ ಹುದುಗಿ ಹೋಗಿದ್ದ ಈ ಶಾಸನವನ್ನು ಜೆಸಿಬಿ ಮುಖಾಂತರ ಹೊರ ತೆಗೆಯಲಾಗಿದ್ದು, ಈ ಶಾಸನವು ಸುಮಾರು 5 ಅಡಿ ಉದ್ದ ಮತ್ತು 2.5 ಅಡಿ ಅಗಲವಿದ್ದು ಗ್ರಾನೈಟ್ ಶಿಲೆ (ಕಣಶಿಲೆ)ಯಲ್ಲಿ ಎರಡು ಬದಿಯಲ್ಲಿಯೂ ಶಾಸನವನ್ನು ಕೊರೆಯಲಾಗಿದೆ. ಶಾಸನದ ಮುಂಬದಿಯ ಮೇಲ್ಭಾಗದಲ್ಲಿ ಶಿವಲಿಂಗ, ದೀಪಕಂಬ, ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. ಶಾಸನವು ಭಗ್ನಗೊಂಡಿರುವುದರಿಂದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು ಪ್ರಾರಂಭದಲ್ಲಿ ನಮಸ್ತುಂಗ ಶಿರಸ್ತುಂಬಿ ಎಂಬ ಶೈವ ಸ್ತುತಿಯನ್ನು ಕಾಣಬಹುದು.
ಶಾಸನವು ಶಕವರ್ಷ 1301 (ಸಾ.ಶ.ವ 1378-79) ರ ಕಾಳಯುಕ್ತ ಸಂವತ್ಸರಕ್ಕೆ ಸರಿಹೊಂದುತ್ತದೆ. ಈ ಅವಧಿಯಲ್ಲಿ ಇಮ್ಮಡಿ ಹರಿಹರ ನು ವಿಜಯನಗರವನ್ನು ಆಳುತ್ತಿರುವಾಗ ಬಾರಕೂರು ರಾಜ್ಯವನ್ನು ಬೊಮ್ಮರಸ ಒಡೆಯ ಪ್ರತಿಪಾಲಿಸುತ್ತಿದ್ದರೆಂಬುದು ಶಾಸನದಿಂದ ದೃಢಪಡುತ್ತದೆ. ಶಾಸನದಲ್ಲಿ ಗೋತ್ರ, ಅಮೃತಪಡಿ, ಧಾರಪೂರ್ವಕ ದಾನ ಎಂಬ ಉಲ್ಲೇಖಗಳು ಕಂಡುಬರುವುದರಿಂದ ಇದೊಂದು ದೇವಾಲಯಕ್ಕೆ ಬಿಟ್ಟ ದತ್ತಿ ಶಾಸನವಾಗಿದ್ದು, ದಾನವನ್ನು ಯಾರು ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿಯು ಲಿಪಿಯ ತೃಟಿತದಿಂದಾಗಿ ಸ್ಪಷ್ಟವಾಗಿಲ್ಲ. ಶಾಸನದ ಹಿಮ್ಮುಖದಲ್ಲಿ ಶಾಪಶಯ ವಾಕ್ಯವಿದೆ. ಶಾಸನದ ಕೆಳಭಾಗದಲ್ಲಿ ನುಚಿ ಎಂಬ ಪದದ ಉಲ್ಲೇಖವಿದೆ. ಪ್ರಸ್ತುತ ಶಾಸನವು ನೂಜೀ ಮಠದಲ್ಲಿ ಪತ್ತೆಯಾಗಿರುವುದರಿಂದ ಈ ನುಚಿ ಎಂಬುದು ನೂಜೀ ಮಠದ ಪ್ರಾಚೀನ ಹೆಸರಾಗಿರಬಹುದು.
ಪ್ರಸ್ತುತ ಪತ್ತೆಯಾಗಿರುವ ಶಾಸನವು ನೂಜೀ ಪ್ರದೇಶದ ಪ್ರಾಚೀನ ಶಾಸನವಾಗಿದ್ದು, ಮುಂದಿನ ದಿನಗಳಲ್ಲಿ ಶಾಸನದ ಡಿಜಿಟಲಿಕರಣ ಮಾಡಿ ಹೆಚ್ಚಿನ ಅಧ್ಯಯನವನ್ನು ಮಾಡುವ ಅವಶ್ಯಕತೆ ಇದೆ ಎಂದು ಸಂಶೋಧನಾರ್ಥಿಗಳು ತಿಳಿಸಿರುತ್ತಾರೆ.
ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಎಂ ಎಸ್ ಆರ್ ಎಸ್ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ. ಮತ್ತು ಮಂಜುನಾಥ ನಂದಳಿಕೆ ಹಾಗೂ ರಾಘವೇಂದ್ರ ಸಾಮಗರು, ಮಠದವರು ಮತ್ತು ಸ್ಥಳಿಯರು ಸಹಕಾರ ನೀಡಿರುತ್ತಾರೆ.