ಮಣಿಪಾಲ: ನಿರ್ಮಾಣ ಹಂತದ ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾರ್ಮಿಕರೊಬ್ಬರು ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಮಣಿಪಾಲದ ಈಶ್ವರ ನಗರದಲ್ಲಿ ಈ ಘಟನೆ ನಡೆದಿದೆ.
ಕುಕ್ಕೆಹಳ್ಳಿ ಗ್ರಾಮದ 50 ವರ್ಷದ ರಘುರಾಮ ಕುಲಾಲ್ ಮೃತ ದುರ್ದೈವಿ. ಈಶ್ವರನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ರಘುರಾಮ್ ಮಹಡಿಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ವೇಳೆ ಬಕೆಟ್ ತರಲು ಕಟ್ಟಡದ ಹೊರಮೈಯ ಪ್ಯಾರಪೀಟ್ ಮೇಲೆ ಕಾಲು ಇಟ್ಟಿದ್ದರು. ಈ ವೇಳೆ ಕಾಲು ಜಾರಿ ಅವರು ಕೆಳಗೆ ಬಿದ್ದರು ಎಂದು ಹೇಳಲಾಗಿದೆ.
ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಈ ಸೈಟ್ ನಲ್ಲಿ ಹತ್ತು ಮಂದಿ ಕೆಲಸ ಮಾಡುತ್ತಿದ್ದು, ರಘುರಾಮ್ ಅವರ ಸಹೋದರನೂ ಇಲ್ಲಿ ಕೆಲಸ ಮಾಡುತ್ತಿದ್ದರು. ಕಟ್ಟಡದ ಮಾಲಕ ಗಣೇಶ್ ಮತ್ತು ಗುತ್ತಿಗೆದಾರ ಅಮರೇಶ ಗಾರೆ ಕೆಲಸ ಮಾಡುವ ವೇಳೆ ಮುನ್ನೆಚ್ಚರಿಕೆ ವಹಿಸಿಲ್ಲ ಎನ್ನಲಾಗಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.