ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತವಾಗಿದೆ. ಮತ್ತೊಂದೆಡೆ ಮಳೆ ನೀರು ರಸ್ತೆಯ ಮೇಲೆ ನದಿಯಂತೆ ಹರಿದಿದೆ. ಇದರಿಂದ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹಿಂದಕ್ಕೆ ಹೋಗಲೂ ಆಗದೆ, ಮುಂದಕ್ಕೆ ಹೋಗಲೂ ಆಗದೆ ವಾಹನ ಸವಾರರು ತೀವ್ರ ಪರದಾಡಿದ ಘಟನೆ ನಡೆದಿದೆ.
ಕೊಟ್ಟಿಗೆಹಾರ, ಬಾಳೂರು, ಬಣಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸತತ ಎಡಬಿಡದೇ ಮಳೆ ಸುರಿದಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲೂ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.