ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಏಳು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನಿಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ.
ದುರಂತವನ್ನು ಕಣ್ಣಾರೆ ಕಂಡಿರುವ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಪ್ರತ್ಯಕ್ಷ ದರ್ಶಿ ರಾಜು ಎಂಬವರು ಮಾತನಾಡಿ, ಕಾರಿನಲ್ಲಿ ಒಂದು ಕುಟುಂಬ ಹೋಗುತಿತ್ತು. ಅವರು ಸಡನ್ ಆಗಿ ಕಾರು ನಿಲ್ಲಿಸಿ ನಿಧಾನಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದರು. ನಾನು ಹಿಂದಿನ ಗಾಡಿಯಲ್ಲಿದ್ದೆ. ಕೂಡಲೇ ನಾನು ವಾಹನದಿಂದ ಇಳಿದು, ನೋಡುತ್ತ ನಿಂತೆ. ಗುಡ್ಡ ಕುಸಿಯುತ್ತಿತ್ತು. ನಂತರ ನಾನು ಜೀವ ಉಳಿಸಿಕೊಳ್ಳಲು ಸಡನ್ ಆಗಿ ಬೇರೆ ಕಡೆ ಹಾರಿದೆ. ಸ್ವಲ್ಪದರಲ್ಲೇ ನನ್ನ ಸಾವು ತಪ್ಪಿತ್ತು. ಅಲ್ಲಿ ಒಂದು ಟೀ ಅಂಗಡಿ ಇತ್ತು. ಟೀ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಗ್ಯಾಸ್ ಟ್ಯಾಂಕರ್ ಕೂಡ ಇಲ್ಲೇ ನಿಲ್ಲಿಸಿದ್ದರು. ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದೆ. ಕಾರು ಮತ್ತು ಟೀ ಅಂಗಡಿ ಹಾಗೂ ಸುಮಾರು ಒಂಬತ್ತು ಜನ ಮಣ್ಣು ಪಾಲಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ದುರ್ಘಟನೆಯಲ್ಲಿ 9 ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಗಂಗಾವಳಿ ನದಿಗೆ ಹೊಂದಿಕೊಂಡಿರುವ ಗುಡ್ಡ ಇದಾಗಿದ್ದು, ಸತತ ಮಳೆಯಿಂದ ಸಡಿಲಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲ-ಕುಮಟಾ ನಡುವೆ ಸಂಚಾರ ಬಂದ್ ಆಗಿದೆ.
