ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಇಂದಿನ ಪುಣ್ಯಕ್ಷೇತ್ರದ ಚಟುವಟಿಕೆಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದವು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ಬಿನ್ನಹಗಳನ್ನು ಸಲ್ಲಿಸಲು ಅತ್ತೂರಿನ ಪುಣ್ಯಸ್ಥಳಕ್ಕೆ ಆಗಮಿಸಿದರು. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಮತ್ತು ನಾಟಕದ ಪ್ರದರ್ಶನ ದಿನದ ಮುಖ್ಯ ವಿಧಿ ಆಚರಣೆಗಳಾಗಿದ್ದವು.
ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಇಂದಿನ ಧಾರ್ಮಿಕ ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು. ಭಕ್ತರು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಿ, ತಮ್ಮ ಬಿನ್ನಹಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು.
ಈ ವರ್ಷದ ಮಹೋತ್ಸವದ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಇಂದು ಮೂರು ಬಲಿಪೂಜೆಗಳು ನಡೆದವು. ಪ್ರಮುಖ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಶ್ರೇಷ್ಟ ಗುರು ಅ/ವಂ/ ಮೊನ್ಸಿಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅರ್ಪಿಸಿದರು. ಪ್ರಭುವಿನಲ್ಲಿ ಭರವಸೆ ಇರಿಸಿ ಕ್ರೈಸ್ತ ಬದುಕನ್ನು ಆಶಾದಾಯಕವಾಗಿ ಬದುಕಬೇಕು. ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ನಮ್ಮ ಹೆಜ್ಜೆಯನ್ನಿಡುತ್ತಾ ಸಾಗಬೇಕೆಂದು ಬೋಧಿಸಿದರು.
ನಸುಕಿನಿಂದಲೇ ವಿವಿಧ ಸ್ಥಳಗಳಿಂದ ಭಕ್ತರು ಧಾವಿಸಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಯಂಕಾಲ ಸಂತ ಲಾರೆನ್ಸ್ ಅವರ ಜೀವನ ಆಧಾರಿತ “ಲಾರೆನ್ಸ್ ಮಹಾತ್ಮೆ” ನಾಟಕ ಪ್ರದರ್ಶಿಸಲಾಯಿತು.
ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸಲು ಭಕ್ತಸಾಗರ ಮುಗಿಬಿದ್ದಿತ್ತು. ನಸುಕಿನಿಂದ ರಾತ್ರಿ ವರೆಗೆ ಪುಣ್ಯಕ್ಷೇತ್ರ ಭಕ್ತರ ಪುಣ್ಯದಾಯಕ ಸ್ಥಳವಾಗಿ ಪರಿವರ್ತಿತಗೊಂಡಿತ್ತು