ಶಾದೋಲ್ (ಮ.ಪ್ರ.): ಸಫಾರಿ ವೇಳೆ ಪ್ರವಾಸಿಗರ ಹುಚ್ಚಾಟದಿಂದ ಪ್ರಾಣಿಗಳು ಅವರ ಮೇಲೆ ಎರಗುವ ಹಲವು ಸನ್ನಿವೇಶಗಳು ವರದಿಗಳಾಗಿವೆ. ಇದೀಗ ಮಧ್ಯಪ್ರದೇಶದ ಅರಣ್ಯ ಪ್ರದೇಶವೊಂದರಲ್ಲಿ ಸಫಾರಿ ಮಾಡಲು ಬಂದ ಪ್ರವಾಸಿಗರ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ವರದಿಯಾಗಿದೆ. ಶಾದೋಲ್ ವಲಯದ ಖಿತೌಲಿ ಬೀಟ್‌ನ ಸೋನ್ ನದಿ ಪಾತ್ರದ ಬಳಿ ಗುಂಪೊಂದು ಪಿಕ್‌ನಿಕ್‌ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಚಿರತೆಯ ದಾಳಿಯಿಂದ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಯುವಕನೊಬ್ಬ ಚಿತ್ರೀಕರಿಸಿದ್ದ ವಿಡಿಯೋವೊಂದು ವೈರಲ್ ಆಗಿದೆ. ಚಿರತೆಗೆ ತಮಾಷೆ ಮಾರುತ್ತಾ ವಿಡಿಯೋ ಚಿತ್ರೀಕರಣ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದುರುಗುಟ್ಟಿ ನೋಡುತ್ತಿದ್ದ ಚಿರತೆಯನ್ನು ಬಾ.. ಬಾ.. ಎಂದು ಕರೆಯುತ್ತಿದ್ದು, ಅದನ್ನು ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ. ಆದರೆ ಈ ತಮಾಷೆ ಹೆಚ್ಚು ಹೊತ್ತು ಉಳಿಯಲಿಲ್ಲ. ದಿಢೀರನೆ ವೇಗವಾಗಿ ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿಬಿಟ್ಟಿತ್ತು.
ಇಬ್ಬರು ಯುವಕರ ಮೇಲೆ ದಾಳಿ ನಡೆಸಿದ್ದ ಚಿರತೆ ಮತ್ತೊಬ್ಬನನ್ನು ಮೇಲೆ ಕಚ್ಚಿ ಎಳೆದಾಡಿದ ದೃಶ್ಯ ವಿಡಿಯೋದಲ್ಲಿದೆ. ಚಿರತೆಯ ದಾಳಿಯಿಂದ ಕಂಗೆಟ್ಟ ಯುವಕರು ಬೊಬ್ಬೆ ಹೊಡೆಯುತ್ತ… ಓಡಿ ಓಡಿ ಎಂದು ಹೇಳುತ್ತಿದ್ದು… ಚಿರತೆ ದಾಳಿ ನಡೆಸಿ ಓಡಿ ಹೋಗುವ ಮೊದಲು ವಿಡಿಯೋ ದೃಶ್ಯ ಕಟ್ ಆಫ್ ಆಗಿರುವುದಾಗಿ ವರದಿ ತಿಳಿಸಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…
https://www.ndtv.com/videos/video-they-shouted-come-come-come-at-leopard-it-mauled-3-people-851907