“ಸುಭಿಕ್ಷಾ” ದಂತ ಆರೋಗ್ಯ ಮಾರ್ಗದರ್ಶಿ ಬಿಡುಗಡೆ
ಮಂಗಳೂರು: ‘ಸುಭಿಕ್ಷಾ’ ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೃತಿಯಾಗಿದ್ದು, ಓದುಗರಲ್ಲಿ ಹಲ್ಲುಗಳ ಆರೋಗ್ಯದ ಕಾಳಜಿ ಮೂಡಿಸುತ್ತದೆ. ಡಾ. ಮುರಲೀ ಮೋಹನ್ ಚೂಂತಾರು ಅವರ ಕೃತಿಯೊಂದು 16 ಮುದ್ರಣಗಳನ್ನು ಕಂಡಿರುವುದು ಜನರಲ್ಲಿ ಆರೋಗ್ಯದ ಕುರಿತು ಇರುವ ಜಾಗೃತಿಯನ್ನು ವಿವರಿಸುತ್ತದೆ. ವೈದ್ಯ ವಿಜ್ಞಾನವನ್ನು ಕನ್ನಡದಲ್ಲಿ ಹೇಳಲು ಸಾಧ್ಯವಿಲ್ಲ ಎಂಬ ಪುಕಾರು ಇದೆ. ಇದನ್ನು ಚೂಂತಾರು ಸುಳ್ಳಾಗಿಸಿದ್ದಾರೆ. ವೈದ್ಯ ವಿಜ್ಞಾನವನ್ನು ಕನ್ನಡ ಸಾಹಿತ್ಯದ ಪ್ರಧಾನ ಕವಲಾಗಿ ಸ್ವೀಕರಿಸಬೇಕು. ಕಥೆ ಕಾದಂಬರಿಗಳೊಂದಿಗೆ ವೈದ್ಯಲೋಕವನ್ನು ತೆರೆದಿಡುವುದು ಕೂಡಾ ಸಾಹಿತ್ಯವಾಗಿದೆ. ಕೃತಿಯ ಕೊನೆಯ ಮಾತುಗಳು ಇಡೀ ಸಾರಾಂಶ ಹಾಗೂ ಕಿವಿಮಾತು ಹೇಳುವಂತಿದೆ. ದಂತ ಚಿಕಿತ್ಸೆ ಪಡೆದವರಿಗೆ ಕೃತಿಯ ಮೂಲಕ ಆರೋಗ್ಯ ಸುಧಾರಿಸಲು ಸಾಧ್ಯವಿದೆ ಎಂದು ಹಿರಿಯ ಸಂಶೋಧಕ ಹಾಗೂ ಸಾಹಿತಿ ಪ್ರೊ. ಎ.ವಿ. ನಾವಡ ಇವರು ‘ಸುಭಿಕ್ಷಾ’ ಕೃತಿಯ ಪರಿಚಯ ನೀಡಿದ್ದಾರೆ.
ಡಿ.30ರಂದು ದಂತ ವೈದ್ಯ ಡಾ. ಮುರಲೀ ಮೋಹನ್ ಚೂಂತಾರು ಇವರು ಬರೆದ 16ನೇ ಕೃತಿ “ಸುಭಿಕ್ಷಾ” ದಂತ ಆರೋಗ್ಯ ಮಾರ್ಗದರ್ಶಿ ಪುಸ್ತಕ ಮಂಗಳೂರಿನ ಪತ್ರಿಕಾ ಭವನದಲ್ಲಿ ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಎಂಡಿ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ ಇವರು ಲೋಕಾರ್ಪಣೆಗೊಳಿಸಿದರು.
ಕೃತಿ ಬಿಡುಗೊಳಿಸಿ ಮಾತನಾಡಿದ ಇವರು ಡಾ. ಮುರಲೀ ಮೋಹನ್ ಚೂಂತಾರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದಾರೆ. ಇವರು ಸರಣಿ ಕೃತಿಗಳನ್ನು ರಚಿಸಿದ್ದು, ಎಲ್ಲಾ ವರ್ಗದ ಜನತೆಗೆ ಉಪಯುಕ್ತವಾಗುವಂತಹ ದಂತ ಆರೋಗ್ಯದ ಅತ್ಯಮೂಲ್ಯ ಮಾಹಿತಿ ಪೂರ್ಣ ‘ಸುಭಿಕ್ಷಾ’ ಕೃತಿ ಇದಾಗಿದೆ. ಸರಳವಾದ ಭಾಷೆಯಲ್ಲಿ ಓದುಗರಿಗೆ ಲಭ್ಯವಾಗಿದೆ. ಚೂಂತಾರು ಅವರಿಗೆ ಕನ್ನಡ ಬಾಷೆಯ ಮೇಲೆ ಉತ್ತಮ ಹಿಡಿತ ಮತ್ತು ತುಡಿತ ಇದೆ. ಇವರ ಉತ್ತಮ ವೈದ್ಯ ಸಾಹಿತ್ಯ ಕೃಷಿ ನಿರಂತರವಾಗಿ ಮುಂದುವರಿಯಲಿ ಎಂದರು.
ಹಿರಿಯ ದಂತ ವೈದ್ಯ ಡಾ. ಗಣಪತಿ ಭಟ್ ಕುಳಮರ್ವ ಮಾತನಾಡಿ, ಸಾಮಾನ್ಯ ಜನರಿಗೆ ಆರೋಗ್ಯ ಸುಭಿಕ್ಷೆ ನೀಡುವ ಕೆಲಸ ಡಾ.ಮುರಲೀ ಮೋಹನ್ ಚೂಂತಾರು ಮಾಡಿದ್ದಾರೆ. ಶ್ರೀಯುತರು ಬಹುಮುಖ ಪ್ರತಿಭೆಯಾಗಿದ್ದು, ತನ್ನ ಬಿಡುವಿಲ್ಲದ ಸಮಯದಲ್ಲೂ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ವೈದ್ಯ ಸಾಹಿತ್ಯಕ್ಕೆ ಚೂಂತಾರು ಅವರ ಕೊಡುಗೆ ಅಪಾರ. ಅವರ ಸಾಮಾಜಿಕ ಕಳಕಳಿ ಮಹತ್ವದ್ದಾಗಿದ್ದು, ಮತ್ತಷ್ಟು ಕೀರ್ತಿ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.
ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣ್‍ಕರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಗೌತಮ್ ಕುಳವರ್ಮ ಉಪಸ್ಥಿತರಿದ್ದರು. ಲೇಖಕ ಡಾ. ಮುರಲೀ ಮೋಹನ ಚೂಂತಾರು ಸ್ವಾಗತಿಸಿದರು. ಕಸಾಪ ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಗಣೇಶ್ ಪ್ರಸಾದ್ ವಂದಿಸಿದರು.