ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ ದ ಸಹಯೋಗದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 100 ನೇ ಸಂಚಿಕೆ
ಮಾರ್ಚ್ ತಿಂಗಳ ದಿನಾಂಕ 30 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಸಾಹಿತ್ಯಾಸಕ್ತರು ಮತ್ತು ಪ್ರಾಧ್ಯಾಪಕರಾದ ಡಾ.ನೀತಾ ಇನಾಂದಾರ್ ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಮಾರ್ಚ್ 31 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ನಮ್ಮ ರಾಜ್ಯದಲ್ಲೇ ಮೊದಲ ಬಾರಿಗೆ ಸಮುದಾಯ ಬಾನುಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಈ ರೀತಿಯ ಕಥಾಸರಣಿಯು ಮೂಡಿಬರುತ್ತಿದ್ದು ರೇಡಿಯೊ ಮಣಿಪಾಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಹಾಗೂ ಉಡುಪಿ ತಾಲೂಕು ಘಟಕಕ್ಕೆ ಹೆಮ್ಮೆತಂದಿದೆ. ಈ ಕಥಾಯಾನದಲ್ಲಿ ಅನೇಕ ಮಂದಿ ಹಿರಿಯರು, ಉದಯೋನ್ಮುಖ ಕಥೆಗಾರರು ಭಾಗವಹಿಸಿ ವಿಶಿಷ್ಟ ಕಥಾನಕಗಳ ಸ್ವರಚಿತ ಕಥೆಗಳನ್ನು ಕೇಳುಗರ ಮುಂದಿಟ್ಟಿದ್ದಾರೆ. ಸಮುದಾಯ ಬಾನುಲಿಯ ಪರಿಕಲ್ಪನೆಯಂತೆ ಸಮುದಾಯದ ಪಾಲ್ಗೊಳ್ಳುವಿಕೆಗೂ ಇದು ಕಾರಣವಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕವೂ ದೇಶವಿದೇಶಗಳಲ್ಲಿನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದ ಆದಿಭಾಗದಲ್ಲಿ ದಿಕ್ಸೂಚಿಯಂತೆ ಕಾರ್ಯನಿರ್ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು , ಕಥೆಗಾರರಿಗೆ ಸ್ಫೂರ್ತಿಯನ್ನು ತುಂಬುತ್ತಾ ಕಾರ್ಯಕ್ರಮದ ಸಂಚಲನ ಶಕ್ತಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ಅತ್ಯಾಕರ್ಷಕ ಪೋಸ್ಟರ್ ವಿನ್ಯಾಸದ ಮೂಲಕ ಜನಪ್ರಿಯತೆ ಹೆಚ್ಚುವಂತೆ ಮಾಡಿದ ವಿನ್ಯಾಸಗಾರ ಶಶಿಕಾಂತ್ ಶೆಟ್ಟಿಉಡುಪಿ, ಸದಾ ಸಹಕಾರ,ನಗುಮೊಗದಿಂದ ಪ್ರೋತ್ಸಾಹ ವನ್ನು ನೀಡಿದ ಕ.ಸಾ.ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ ಹಾಗೂ ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಸೇರಿದಂತೆ ಕ.ಸಾ.ಪ ಉಡುಪಿ ಜಿಲ್ಲೆ ಮತ್ತು ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು, ಕಥೆಗಾರರು, ಮಾಧ್ಯಮ ಮಿತ್ರರು ಮತ್ತು ಕೇಳುಗರು ರೇಡಿಯೊ ಮಣಿಪಾಲ್ ನಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಯಶಸ್ಸಿಗೆ ನೆರವಾಗಿದ್ದಾರೆ.
ನಿರಂತರ ಪ್ರಸಾರವಾಗುವ ‘ಕಥೆ ಕೇಳೋಣ’ ಸಂಚಿಕೆಯ ಮನದಾಳದ ಮಾತಿಗೆ ರಾಗನೀಡಿದ್ದಾರೆ ಕಾವ್ಯಶ್ರೀ ಸೀತಾರಾಮ ಆಚಾರ್ಯ ಕೊಡವೂರು.ಶತ ಸಂಭ್ರಮದ ವಿಶೇಷ ಸಂಚಿಕೆಯಲ್ಲಿ ಆಕಾಶವಾಣಿಯಲ್ಲಿ ಹಿರಿಯ ಉದ್ಘೋಷಕರಾಗಿ ನಿವೃತ್ತರಾಗಿರುವ ವಿದ್ವಾಂಸ ಮುದ್ದು ಮೂಡುಬೆಳ್ಳೆ, ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಡಾ. ಮಾಧವ ಎಂ.ಕೆ ಹಾಗೂ ಭಾಷಾ ಸಂಶೋಧಕರಾದ ಡಾ.ಕೆ.ಪದ್ಮನಾಭ ಕೇಕುಣ್ಣಾಯ ಅವರಿಂದ ಶುಭ ಸಂದೇಶವನ್ನು ಆಲಿಸಲಿದ್ದೀರಿ ಎಂದು ರೇಡಿಯೋ ಮಣಿಪಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.