ಮಂಗಳೂರು: ಜೀವಂತ ನಾಯಿಯನ್ನು ಅದರ ಮಾಲೀಕರು ಮಹಾನಗರ ಪಾಲಿಕೆಯ ತ್ಯಾಜ್ಯ ಕೊಂಡೊಯ್ಯುವ ವಾಹನಕ್ಕೆ ಕೊಟ್ಟ ಅಮಾನವೀಯ ಘಟನೆ ನಡೆದಿದೆ. ನಗರದ ಡೊಂಗರಕೇರಿಯಲ್ಲಿ ಈ ಘಟನೆ ನಡೆದಿದೆ. ಕುಟುಂಬವೊಂದರ ಸದಸ್ಯರು ಬೇರೆ ಪ್ರದೇಶದಲ್ಲಿ ವಾಸವಾಗಿದ್ದು, ವೃದ್ಧೆಯೊಬ್ಬರು ಮಾತ್ರ ಈ ಮನೆಯಲ್ಲಿದ್ದರು. ಈ ನಾಯಿ ಕೆಲವು ದಿನಗಳಿಂದ ಕೆಲವೆಡೆ ಉಪಟಳ ನೀಡಿತ್ತಂತೆ. ಈ ಕಾರಣಕ್ಕಾಗಿ ಜೀವಂತ ನಾಯಿಯನ್ನು ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಕಾರ್ಮಿಕರೂ ಯಾವುದೇ ವಿರೋಧ ವ್ಯಕ್ತಪಡಿಸದೆ ತ್ಯಾಜ್ಯದೊಂದಿಗೆ ನಾಯಿಯನ್ನು ಪಚ್ಚನಾಡಿಗೆ ಕೊಂಡೊಯ್ದಿದ್ದಾರೆ.
ಘಟನೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ. ಈ ಕುರಿತು ವಿವರ ನೀಡುವಂತೆ ಪಾಲಿಕೆಗೆ ಪಶುಪಾಲನೆ ಇಲಾಖೆ ನೋಟಿಸ್ ನೀಡಿದೆ. ನಾಯಿ ಪತ್ತೆಯಾಗಿಲ್ಲ. ಪಚ್ಚನಾಡಿ ಸುತ್ತಮುತ್ತ ಹುಡುಕುವ ಕೆಲಸ ನಡೆದಿದೆ.