ಮೂಡುಬಿದಿರೆ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬೆಳುವಾಯಿ, ಮಾರೂರು ಮತ್ತು ಬಪ್ಪನಾಡುವಿನಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ರಾಜು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆಯಲ್ಲಿ 96, ಸುರತ್ಕಲ್ 54 ಮತ್ತು ಮುಲ್ಕಿಯಲ್ಲಿ 69 ಮತಕೇಂದ್ರಗಳಿದ್ದು ಇವುಗಳಲ್ಲಿ 20ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮತದಾರರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದರು. ಲೋಕಸಭಾ ಕ್ಷೇತ್ರದ 201ನೇ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 100376 ಪುರುಷ ಮತದಾರರು, 107404 ಮಹಿಳಾ ಮತದಾರರು ಹಾಗೂ ಇತರ 35 ಮತದಾರರು ಸೇರಿದಂತೆ ಒಟ್ಟು 207783 ಮತದಾರರು ಇದ್ದಾರೆ. ಯುವ ಮತದಾರರ ಪೈಕಿ ಗಂಡುಮಕ್ಕಳು 1900 ಮತ್ತು ಹೆಣ್ಣುಮಕ್ಕಳು 2002ರಷ್ಟಿದ್ದು ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೆ ಹೆಚ್ಚು ಇದ್ದಾರೆ . 85 ವರ್ಷ ಮೇಲ್ಪಟ್ಟು ಮತ್ತು ವಿಕಲಚೇತನ ಮತದಾರರು 4487 ಇದ್ದು ಇವರಲ್ಲಿ ಮತದಾನ ಕೇಂದ್ರಕ್ಕೆ ಎಂದರು. ಮನೆಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳು, ಜಾತ್ರೆ, ಉತ್ಸವಗಳಿಗೆ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುವವಂತಿಲ್ಲ. ದಾಖಲೆಗಳಿಲ್ಲದೆ 50 ಸಾವಿರಕ್ಕಿಂತ ಅಧಿಕ ಮೊತ್ತವನ್ನು ವಶಪಡಿಸಿಕೊಳ್ಳಲಾಗುವುದು. ಹಾಗೆಯೇ ಸಂಶಯಾಸ್ಪದವಾಗಿ ಸಾಗಿಸಲ್ಪಡುವ ಉಡುಗೊರೆ, ವಸ್ತುಗಳು ಕಂಡು ಬಂದಲ್ಲಿ ಅವುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು. ತಹಸೀಲ್ದಾರ್ ಶ್ರೀಧರ ಎಸ್ ಮಂಗಲಮನಿ ಸುದ್ದಿಗೋಷ್ಠಿಯಲ್ಲಿದ್ದರು.