ಮಂಗಳೂರು: ಅನ್ಯ ಧರ್ಮದ ಯುವಕನೊಬ್ಬ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ, ಇಬ್ಬರನ್ನೂ ಕಾಸರಗೋಡಿನಲ್ಲಿ ಪತ್ತೆ ಹಚ್ಚಲಾಗಿದೆ. ಯುವಕ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಹೆತ್ತವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಕಾಸರಗೋಡಿನಲ್ಲಿ ಪತ್ತೆ ಹಚ್ಚಿದ್ದಾರೆ. ವಿದ್ಯಾರ್ಥಿನಿಯನ್ನು ನಗರದ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಕಾಸರಗೋಡಿನ ವಿದ್ಯಾನಗರ ನಿವಾಸಿ ಮುಹಮ್ಮದ್ ಅಶ್ಪಾಕ್ ಎಂಬಾತ ಉಳ್ಳಾಲದ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಉಳ್ಳಾಲದಿಂದಲೇ ಜೂ. 30ರಂದು ಅಪಹರಿಸಿದ್ದ ಎಂದು ದೂರು ದಾಖಲಾಗಿದೆ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದರು.
ಅಶ್ಪಾಕ್‌ಗೆ ಹಿಂದೆಯೇ ಮದುವೆಯಾಗಿತ್ತು ಎನ್ನಲಾಗಿದೆ. ಅಲ್ಲದೆ ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
ಮಗಳನ್ನು ಮತಾಂತರಗೊಳಿಸಲೆಂದು ಅಪಹರಣ ನಡೆಸಲಾಗಿದೆ. ಅಶ್ಪಾಕ್ ಮತ್ತು ಆತನ ತಂಡದಿಂದ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂದು ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆಗೆ ಶ್ರೀರಾಮ ಸೇನೆಯೂ ಒತ್ತಾಯಿಸಿದೆ.