ಲಕ್ನೊ: ಪ್ರೀತಿಸಿ ಮದುವೆಯಾಗಿ ಅನೋನ್ಯವಾಗಿದ್ದ ಜೋಡಿಯೊಂದು ದಿಢೀರ್ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ವಾರಣಾಸಿಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡರೆ, ಪತ್ನಿ ತನ್ನ ಮನೆಯಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಪಾಟ್ನಾ ನಿವಾಸಿ ಹರೀಶ್ ಬಾಗೇಶ್ ಮತ್ತು ಗೋರಖ್‌ಪುರ ನಿವಾಸಿ ಸಂಚಿತಾ ಶ್ರೀವಾಸ್ತವ್ ಶಾಲಾ ದಿನಗಳಿಂದಲೂ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿ, ಪರಸ್ಪರ ಇಷ್ಟಪಟ್ಟು ಮದುವೆ ಆಗಿದ್ದರು.
ಮದುವೆಯಾಗಿ ಕೆಲವು ವರ್ಷಗಳಿಂದ ಅನೋನ್ಯವಾಗಿ ಬದುಕಿದ್ದ ಜೋಡಿ ನಿನ್ನೆ ಹಠಾತ್ ಸಾವಿಗೀಡಾಗಿದೆ. ಹರೀಶ್ ವಾರಾಣಸಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದರೆ, ಪತಿಯ ಸಾವಿನ ಆಘಾತದಿಂದ ಸಂಚಿತಾ ಕೂಡ ತನ್ನ ತವರು ಮನೆಯ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾಳೆ.
ಹರೀಶ್ ಮತ್ತು ಸಂಚಿತಾ ಪಿಯುಸಿಯಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮದುವೆಯೂ ಆಗಿದ್ದರು. ಮದುವೆ ಬಳಿಕ ದಂಪತಿ ಮುಂಬೈಯಲ್ಲಿ ನೆಲೆಸಿದ್ದರು. ಅಲ್ಲಿಯೇ ಎಂಬಿಎ ಮುಗಿಸಿದ್ದ ಹರೀಶ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಈ ನಡುವೆ ಅನೇಕ ಕಡೆ ಕೆಲಸಕ್ಕಾಗಿ ಹರೀಶ್ ಅಲೆದಾಡಿದ್ದರು. ಆದರೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಇದರಿಂದ ನೊಂದು ಹರೀಶ್ ಮನೆಗೆ ಹೋಗುವುದಾಗಿ ಹೇಳಿ ಅತ್ತೆ ಮನೆಯಿಂದ ವಾರಾಣಸಿಗೆ ಹೊರಟಿದ್ದ. ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಸೋಮನಾಥದಲ್ಲಿರುವ ಹೋಂ ಸ್ಟೇ ಒಂದಕ್ಕೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗುತ್ತದೆ. ಈ ವಿಚಾರ ಗೋರಖ್‌ಪುರದಲ್ಲಿದ್ದ ಸಿಂಚನಾಗೆ ಗೊತ್ತಾಗಿ, ಆಕೆ ಮನೆಯ ಕಟ್ಟಡದಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.