ಉಡುಪಿ : ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಭಾಗವಹಿಸಲು ಕರಾವಳಿ ಜನರಿಗೆ ಉಡುಪಿಯಿಂದ (udupi) ಪ್ರಯಾಗ್ ರಾಜ್ ಗೆ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಉಡುಪಿಯಿಂದ ಫೆಬ್ರವರಿ 17ರ ಮಧ್ಯಾಹ್ನ 12:30ಕ್ಕೆ ರೈಲು ಹೊರಡಲಿದ್ದು ಫೆಬ್ರವರಿ 19 ರ ಬೆಳಗ್ಗೆ 6:30ಕ್ಕೆ ಪ್ರಯಾಗ್ ರಾಜ್ ತಲುಪಲಿದೆ. ಮತ್ತೆ ಫೆಬ್ರವರಿ 20ರ ಸಂಜೆ 6:30 ಕ್ಕೆ ಪ್ರಯಾಗ್ ರಾಜ್ ನಿಂದ ಹೊರಟು ಫೆಬ್ರವರಿ 22ರ ಸಂಜೆ ವೇಳೆಗೆ ಉಡುಪಿಗೆ ಬಂದು ತಲುಪಲಿದೆ ಎಂದು ಕೊಂಕಣ ರೈಲ್ವೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ಇತ್ತೀಚಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ಭೇಟಿ ಮಾಡಿ ಉಡುಪಿಯಿಂದ ಪ್ರಯಾಗ್ ರಾಜ್ ಗೆ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸುವಂತೆ ಮನವಿ ಮಾಡಿದ್ದು ಇದಕ್ಕೆ ಸಚಿವರು ಶೀಘ್ರವೇ ಸ್ಪಂದಿಸಿದ ಕಾರಣ ರೈಲ್ವೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಸದ್ಯ ಫೆಬ್ರವರಿ 14ರ ಮಧ್ಯಾಹ್ನದ ನಂತರ ಬುಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸೂಚಿಸಿದೆ.