Sunday, January 19, 2025
Homeಮುಂಬೈಮಹಾರಾಷ್ಟ್ರ: ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಕೊಲೆ ಆರೋಪಿ; ಪ್ರಕರಣ ದಾಖಲು

ಮಹಾರಾಷ್ಟ್ರ: ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಕೊಲೆ ಆರೋಪಿ; ಪ್ರಕರಣ ದಾಖಲು

ಥಾಣೆ: ಪ್ರಕರಣವೊಂದರ ವಿಚಾರಣೆ ವೇಳೆಯಲ್ಲಿ ಕೊಲೆ ಆರೋಪಿಯೊಬ್ಬ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ಪಟ್ಟಣದ ಜಿಲ್ಲಾ ಸೆಷನ್ಸ್ ಕೋರ್ಟ್‌ನಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಕೊಲೆ ಆರೋಪಿ ಕಿರಣ್ ಸಂತೋಷ್ ಭರಮ್ (22) ಎಂಬಾತ ಚಪ್ಪಲಿ ಎಸೆದಿದ್ದು, ಚಪ್ಪಲಿ ಜಡ್ಜ್‌ಗೆ ತಾಗಿಲ್ಲ. ಬದಲಿಗೆ ಅವರ ಮೇಜಿನ ಮುಂಭಾಗದ ಮರದ ಪಟ್ಟಿಗೆ ಹೊಡೆದಿದ್ದು, ಕ್ಲರ್ಕ್ ಬೆಂಚ್ ಕಡೆಯಿಂದ ಕೆಳಗೆ ಬಿದ್ದಿದೆ. ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಆತನನ್ನು ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಆರ್. ಜಿ ವಾಗ್ಮರೆ ಅವರ ಮುಂದೆ ಹಾಜರುಪಡಿಸಿದಾಗ ಅವರತ್ತ ಆರೋಪಿ ಈ ಕೃತ್ಯ ಎಸಗಿರುವುದಾಗಿ ಮಹಾತ್ಮ ಪುಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿ ಮತ್ತೊಂದು ಕೋರ್ಟ್‌ಗೆ ತನ್ನ ಕೇಸ್‌ನ್ನು ವರ್ಗಾಯಿಸುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದಾನೆ. ಇದೇ ರೀತಿಯಲ್ಲಿ ವಕೀಲರ ಮೂಲಕ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಆರೋಪಿಗೆ ಹೇಳಿದ್ದಾರೆ. ಬಳಿಕ ಆರೋಪಿ ಪರ ವಕೀಲರನ್ನು ಕರೆಯಲಾಗಿದೆ. ಆದರೆ ವಕೀಲರು ನ್ಯಾಯಾಲಯದಲ್ಲಿ ಇರಲಿಲ್ಲ. ಹೀಗಾಗಿ ವಕಾಲತ್ತು ವಹಿಸಲು ಮತ್ತೊಬ್ಬ ವಕೀಲರ ಹೆಸರನ್ನು ನೀಡುವಂತೆ ಹೇಳಿ, ನ್ಯಾಯಾಲಯ ಹೊಸ ದಿನಾಂಕವನ್ನು ನೀಡಿದೆ. ಇದರಿಂದ ರೊಚ್ಚಿದ ಆರೋಪಿ ಜಡ್ಜ್ ಅವರತ್ತ ಚಪ್ಪಲಿ ಎಸೆದಿದ್ದಾರೆ.
ಈ ಅನಿರೀಕ್ಷಿತ ಘಟನೆ ಕಂಡು ಕೋರ್ಟ್‌ನಲ್ಲಿದ್ದವರು ದಂಗಾದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 132 ( ಹಲ್ಲೆ ಅಥವಾ ಕ್ರಿಮಿನಲ್ ಶಕ್ತಿಯಿಂದ ಸರ್ಕಾರಿ ಸೇವಕ ಕರ್ತವ್ಯ ನಿರ್ವಹಣೆಗೆ ಅಡ್ಡಿ) 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular