Wednesday, January 15, 2025
Homeಮಂಗಳೂರುಮಾಹೆಯ ಎರಡು ಸಾಕ್ಷ್ಯಚಿತ್ರಗಳು ಕೇರಳದ ತ್ರಿಶೂರಿನ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೆ ಆಯ್ಕೆ

ಮಾಹೆಯ ಎರಡು ಸಾಕ್ಷ್ಯಚಿತ್ರಗಳು ಕೇರಳದ ತ್ರಿಶೂರಿನ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೆ ಆಯ್ಕೆ


ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಎರಡು ಸಾಕ್ಷ್ಯ ಚಿತ್ರಗಳು ಕೇರಳದ ತ್ರಿಶೂರಿನ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವ [ಐಎಫ್‌ಎಫ್‌ಎಫ್‌]ದ 8 ನೆಯ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗುವುದರೊಂದಿಗೆ ಸಂಸ್ಥೆಯ ಮಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಐಎಫ್‌ಎಫ್‌ಎಫ್‌ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವಾಗಿದ್ದು ಅದು ಸಿನೆಮಾದ ಮೂಲಕ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉತ್ಸವವಾಗಿದೆ. ಈ ಸಲದ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಸುಮಾರು 800 ಚಿತ್ರಗಳು ಪ್ರವೇಶ ಬಯಸಿದ್ದು, ಈ ವರ್ಷ ಜಾನಪದ-ಆಧಾರಿತ ಕಥಾನಿರೂಪಣೆಯ ಸಮೃದ್ಧ ವೈವಿಧ್ಯವಿರುವ ಸುಮಾರು 200 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. 2025 ಜನವರಿ 10 ರಿಂದ 15 ರ ನಡುವೆ ಮಾಹೆಯ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಈ ಚಿತ್ರೋತ್ಸವವನ್ನು ತ್ರಿಶೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಂಟರ್‌ನ್ಯಾಶನಲ್‌ ಫೆಸ್ಟಿವಲ್‌ ಆಫ್‌ ತ್ರಿಶೂರ್‌-ಐಎಫ್‌ಎಫ್‌ಟಿ], ಭೌಮನ್‌ ಸೋಶಿಯಲ್‌ ಇನೀಶಿಯೇಟಿವ್‌, ತ್ರಿಶೂರಿನ ಸೆಂಟ್‌ ಥಾಮಸ್‌ ಕಾಲೇಜಿನ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಮತ್ತು ಇಂಟರ್‌ನ್ಯಾಶನಲ್‌ ಫೋಕ್‌ ಫಿಲ್ಮ್ಸ್‌ ಇಂಡಿಯಾ ಆಯೋಜಿಸುತ್ತಿವೆ.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದ ‘ಪಿಲಿವೇಷ ಆಫ್‌ ತುಳುನಾಡು’ ಮತ್ತು ‘ಸತ್ಯೊದ ಸಿರಿ : ಎ ವುಮನ್ಸ್‌ ಟೇಲ್‌’ ಸಾಕ್ಷ್ಯಚಿತ್ರಗಳು ಪ್ರಾದೇಶಿಕವಾದ ಜೀವಂತಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಮಾಹೆಯ ಬದ್ಧತೆಗೆ ಸಾಕ್ಷಿಗಳಾಗಿವೆ. ‘ಪಿಲಿವೇಷ ಆಫ್‌ ತುಳುನಾಡು’ ಆಳವಾಗಿ ಬೇರೂರಿರುವ ಪಿಲಿವೇಷ ಸಂಪ್ರದಾಯದ ಕುರಿತು ಇದೆ. ‘ಪಿಲಿವೇಷ’ವು ತುಳುನಾಡಿನ ಸಾಂಸ್ಕೃತಿಕ ಅನನ್ಯತೆಯ ಕೇಂದ್ರದಲ್ಲಿರುವ ಒಂದು ಸಾಂಕೇತಿಕ ಮತ್ತು ಕಲಾತ್ಮಕ ಆಚರಣೆಯಾಗಿದೆ. ಅನನ್ಯವಾಗಿರುವ ಕಲಾತ್ಮಕ ಅಭಿವ್ಯಕ್ತಿಯನ್ನು ಉಳಿಸಿಕೊಳ್ಳುವ ಜೊತೆಗೆಯೇ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಏಕತೆಯನ್ನು ಪ್ರೇರೇಪಿಸುವಲ್ಲಿ ‘ಪಿಲಿವೇಷ’ದ ಮಹತ್ತ್ವವನ್ನು ಈ ಚಿತ್ರವು ಎತ್ತಿ ಹಿಡಿಯುತ್ತದೆ. ‘ಸತ್ಯದ ಸಿರಿ: ಎ ವುಮನ್ಸ್‌ ಟೇಲ್‌’ ಕಿರುಚಿತ್ರವು ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಕುರಿತ ಭಾವಪೂರ್ಣ ಕಥನವಾಗಿದ್ದು, ವ್ಯಕ್ತಿಗತ ನಂಬಿಕೆಯ ಪದ್ಧತಿ ಮತ್ತು ಸಮಷ್ಟಿಯ ಯೋಗಕ್ಷೇಮದ ಗಾಢ ಸಂಬಂಧವನ್ನು ಇದು ಪ್ರತಿಫಲಿಸುತ್ತದೆ.
‘ಸತ್ಯದ ಸಿರಿ : ಎ ವುಮನ್ಸ್‌ ಟೇಲ್‌’ ಕಿರುಚಿತ್ರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದ್ದು ಆಸ್ಟ್ರೇಲಿಯಾ ಪರ್ತ್‌ನ ಮಲ್ಟಿಕಲ್ಚರಲ್‌ ಫಿಲ್ಮ್‌ ಫೆಸ್ಟಿವಲ್‌-2024 ರಲ್ಲಿ ಮತ್ತು ಬಾಂಗ್ಲಾದೇಶದ ಢಾಕಾದ ಸಿನೆಮೇಕಿಂಗ್‌ ಫಿಲ್ಮ್‌ಪೆಸ್ಟಿವಲ್‌-2023ರಲ್ಲಿ ಪ್ರದರ್ಶನವನ್ನು ಕಂಡಿದೆ. ‘ಪಿಲಿವೇಷ ಆಫ್‌ ತುಳುನಾಡು’ ಕಿರುಚಿತ್ರವು ಇತ್ತೀಚೆಗೆ ಟೋಕಿಯೋ ಡಾಕ್ಯುಮೆಂಟರಿ ಫಿಲ್ಮ್‌ಫೆಸ್ಟಿವಲ್‌-2024 ಕ್ಕೆ ಅಧಿಕೃತವಾಗಿ ಆಯ್ಕೆಯಾಗುವುದರೊಂದಿಗೆ ಮಾಹೆಗೆ ಹೆಮ್ಮೆ ತಂದಿದೆ. ಜಪಾನ್‌ನ ಟೋಕಿಯೋದಲ್ಲಿ ಡಿಸೆಂಬರ್‌ 5, 2024 ರಂದು ಈ ಕಿರುಚಿತ್ರವು ದೃಶ್ಯ ಮಾನವಶಾಸ್ತ್ರ [ವಿಶುವಲ್‌ ಆ್ಯಂಥ್ರಪಾಲಜಿ] ವಿಭಾಗದಲ್ಲಿ ಪ್ರದರ್ಶನಗೊಂಡಿದೆ.

ಈ ಎರಡು ಸಾಕ್ಷ್ಯಚಿತ್ರಗಳನ್ನು ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌ [ಸಿಐಎಸ್‌ಡಿ] ನ ಸಂಯೋಜಕರಾದ ಡಾ. ಪ್ರವೀಣ್‌ ಕೆ. ಶೆಟ್ಟಿ ಮತ್ತು ಸಂಶೋಧನ ಸಹಾಯಕರಾದ ನಿತೇಶ್‌ ಅಂಚನ್‌ ಅವರು ನಿರ್ದೇಶಿಸಿದ್ದಾರೆ. ಈ ಸಾಕ್ಷ್ಯಚಿತ್ರಗಳು ಮಾಹೆಯ ಉಪಕ್ರಮಗಳಾಗಿರುವ ‘ಡಿಸರ್ನಿಂಗ್‌ ಇಂಡಿಯ : ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು’ ಎಂಬ ಯೋಜನೆಯ ಭಾಗಗಳಾಗಿವೆ. 2021 ರಲ್ಲಿ ಆರಂಭವಾಗಿರುವ ಈ ಯೋಜನೆಯು ಆನ್‌ಲೈನ್‌ ಕೋರ್ಸ್‌ ಮೂಲಕ ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಗುರಿಯನ್ನು ಹೊಂದಿದೆ.
ಮಾಹೆಯ ಡೈರೆಕ್ಟೊರೇಟ್‌ ಆಫ್‌ ಆನ್‌ಲೈನ್‌ ಎಜುಕೇಶನ್‌ ವಿಭಾಗವು ಈ ಸ್ವಯಂ-ಕಲಿಕೆಯ ಆನ್‌ಲೈನ್‌ ಕೋರ್ಸ್‌ನ್ನು ನೀಡುತ್ತಿದ್ದು ಇದು ಸಾಕ್ಷ್ಯಚಿತ್ರಗಳು, ತಜ್ಞರ ಉಪನ್ಯಾಸಗಳು ಮತ್ತು ಶೆಕ್ಷಣಿಕ ಓದುವಿಕೆಗಳೊಂದಿಗೆ, ತುಳುನಾಡಿನ ಜೀವಂತ ಪರಂಪರೆಯ ಆಳವಾದ ಅನುಭವವನ್ನು ನೀಡುತ್ತದೆ. ಈಗಾಗಲೇ ವಿದ್ಯಾರ್ಥಿಗಳೂ ಸೇರಿದಂತೆ 450 ಮಂದಿ ಈ ಕೋರ್ಸ್‌ನ್ನು ಪೂರ್ಣಗೊಳಿಸಿದ್ದು ಇದು ಸ್ಥಳೀಯ ಪರಂಪರೆಯ ಕುರಿತು ಅವರ ತಿಳುವಳಿಕೆಯನ್ನು ಹೆಚ್ಚಿಸಿದೆ. 2024 ರ ಡಿಸೆಂಬರ್‌ ಕೊನೆಯ ವಾರದಲ್ಲಿ ಆನ್‌ಲೈನ್‌ ಕೋರ್ಸ್‌ನ ಹೊಸ ಬ್ಯಾಚ್‌ಗಾಗಿ ನೋಂದಣಿಯನ್ನು ತೆರೆಯಲಾಗುತ್ತದೆ.
ಸಿಐಎಸ್‌ಡಿಯು ಸಕ್ರಿಯವಾಗಿ ಮುಂದುವರಿಸುತ್ತಿರುವ ಪ್ರಯತ್ನಗಳು, ತುಳುನಾಡಿನ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿನ ಮತ್ತು ಪ್ರಸರಣಗೊಳಿಸುವಲ್ಲಿನ ಮಾಹೆಯ ಬದ್ಧತೆಯನ್ನು ಸೂಚಿಸುತ್ತವೆ. ವಿಶ್ವಮಟ್ಟದ ಶೈಕ್ಷಣಿಕ ಸಂಸ್ಥೆಯಾಗಿರುವ ಮಾಹೆಯು ಈ ಸಾಕ್ಷ್ಯಚಿತ್ರಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಸ್ಥಾನಮಾನವನ್ನು ಸಂಭ್ರಮಿಸುವ ಮೂಲಕ, ಸ್ಥಳೀಯ ಪರಂಪರೆಗೆ ಮಹತ್ತ್ವದ ಪ್ರೋತ್ಸಾಹವನ್ನು ನೀಡುತ್ತಿದೆ ಎಂಬುದರ ದ್ಯೋತಕವಾಗಿದೆ.

RELATED ARTICLES
- Advertisment -
Google search engine

Most Popular