ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಳಣ್ಣು ಗ್ರಾಮದ ಕುಡ್ಡಾಲು ಎಂಬಲ್ಲಿ ಸುಮಾರು 47 ವರ್ಷಗಳಿಂದ ಅಂದರೆ 1977ನೇ ಇಸವಿ ಮಾರ್ಚ್ ತಿಂಗಳ ದಿನಾಂಕ 28ರಿಂದ ಪ್ರಾರಂಭವಾಗಿ ಈ ವರೆಗೆ ಯಶಸ್ವಿಯಾಗಿ ಪ್ರತೀ ವರ್ಷವೂ ದೈವಾರಾಧನೆ ಮತ್ತು ವರ್ಷಾವಧಿ ನೇಮೋತ್ಸವವು ಊರ ಹಾಗೂ ಪರವೂರ ಭಕ್ತ ಮಹನೀಯರ ಪ್ರೋತ್ಸಾಹ ಸಹಕಾರದಿಂದ ವಿಜೃಂಭಣೆಯಿಂದ ನಡೆದುಕೊಂಡು ಬಂದಿರುತ್ತದೆ.
ಅಂದಿನ ಕಾಲದಿಂದ ಮುಗ್ಗೇರ ಸಮುದಾಯದವರಿಂದ ಬೆಳ್ಳಣ್ಣು ಕುಡಾಲು ಪರಿಸರದಲ್ಲಿ ಸುಮಾರು ಹದಿನೈದು ಸೆಂಟ್ಸ್ ಜಾಗದಲ್ಲಿ ಗುತ್ತು ಮತ್ತು ಬರ್ಕೆಗಳ ಗುರಿಕಾರರ ಸಮಕ್ಷಮದಲ್ಲಿ ಊರ ಹಾಗೂ ಪರವೂರ ಭಕ್ತ ಮಹನೀಯರು, ನೇತಾರರು ಹಾಗೂ ಹಿರಿಯರ ಸಹಕಾರದಿಂದ ಶ್ರೀ ಬ್ರಹ್ಮ ಮುಗ್ಗೇರ್ಕಳ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ನಡೆದುಕೊಂಡು ಬರುತ್ತಿದೆ. ಸದ್ರಿ ದೈವಸ್ಥಾನದಲ್ಲಿ ಕೇವಲ ಬ್ರಹ್ಮರ ಗುಡಿ ಮಾತ್ರ ಇದ್ದು, ಸ್ಥಳದಲ್ಲಿ ಜೀರ್ಣೋದ್ಧಾರದ ಕಾರ್ಯ ನಡೆಯಬೇಕಿದೆ.
ಈ ನಿಟ್ಟಿನಲ್ಲಿ ದಿನಾಂಕ 23-01-2025ರಂದು ಶ್ರೀ ಸಾನ್ನಿಧ್ಯದಲ್ಲಿ ಜ್ಯೋತಿಷ್ಯರ ಮುಖಾಂತರ ಇಟ್ಟ ಅಷ್ಟಮಂಗಳ ಪ್ರಶೋತ್ತರ ಚಿಂತನೆಯಲ್ಲಿ ಕಂಡುಬಂದಂತೆ ದೈವಗಳು ಚರ ಇದ್ದ ಕಾರಣ ಸಾನ್ನಿಧ್ಯವನ್ನು ನವೀಕರಿಸಿ, ಬೆಳ್ಳಣ್ಣು ವೇದಮೂರ್ತಿ ಶ್ರೀ ವಿಘ್ನೇಶ್ ಭಟ್‌ರವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸುವುದಾಗಿ ತೀರ್ಮಾನಿಸಿದ್ದು.
ಸದ್ರಿ ಈ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡು ಹಳೆಯ ಗುಡಿಗಳನ್ನು ಕೆಡವಿ ಹೊಸ ಗುಡಿಗಳನ್ನು ವಾಸ್ತು ಹಾಗೂ ಆಗಮ ಶಾಸ್ತ್ರದ ಪ್ರಕಾರ ಗುಡಿ ಗೋಪುರವನ್ನು ನಿರ್ಮಾಣ ಮಾಡಿ ಬ್ರಹ್ಮಕಲಶೋತ್ಸವವನ್ನು ನಡೆಸುವರೇ ಗುತ್ತು ಬರ್ಕೆ ಹಾಗೂ ಊರಿನ ಎಲ್ಲಾ ಹಿರಿಯರು ಮತ್ತು ಮುಗ್ಗೇರ ಸಮುದಾಯದವರು ಸೇರಿ ತೀರ್ಮಾನಿಸಿದ್ದೇವೆ. ಈ ಜೀರ್ಣೋದ್ಧಾರದ ಕೆಲಸ ಕಾರ್ಯಗಳಿಗೆ ಸುಮಾರು ರೂ. 35,00,000/- (ರೂಪಾಯಿ ಮೂವತ್ತೈದು ಲಕ್ಷಗಳ ವೆಚ್ಚ ತಗಲಬಹುದೆಂದು ಅಂದಾಜು ಮಾಡಲಾಗಿದೆ. ಈ ಎಲ್ಲಾ ಕೆಲಸ ಕಾರ್ಯಗಳು ಊರ ಹಾಗೂ ಪರವೂರ ಭಕ್ತ ಮಹನೀಯರ ಪ್ರೋತ್ಸಾಹ-ಸಹಕಾರದಿಂದ ನಡೆಯಬೇಕಾಗಿದೆ.
ಆದುದರಿಂದ ಊರ ಹಾಗೂ ಪರವೂರ ಭಕ್ತಾದಿಗಳು ಉದಾರ ಮನಸ್ಸಿನಿಂದ ತನು-ಮನ-ಧನಗಳ ರೂಪದಲ್ಲಿ ಸಹಕಾರವನ್ನು ನೀಡಿ, ದೈವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.