ಕಲಬುರಗಿ: ಹುಂಡಿ ಹಣ ಎಣಿಕೆ ವೇಳೆ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ಸಾಲುಗಳನ್ನು ನೋಡಿ ದೇವಸ್ಥಾನದ ಸಿಬ್ಬಂದಿಗಳೇ ತಬ್ಬಿಬಾದ ಘಟನೆ ಕರ್ನಾಟಕದಲ್ಲಿ ನಡೆದಿದೆ.
ಕರ್ನಾಟಕದ ಕಲಬುರಗಿ ಜಿಲ್ಲೆ ಅಫಜಲಾಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ಭಕ್ತೆಯೊಬ್ಬರು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದ ನೋಟಿನ ಮೇಲೆ ‘ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹಾಕಿದ್ದಾರೆ.
ಇತ್ತೀಚೆಗೆ ದೇಗುಲದ ಹುಂಡಿ ಹಣ ಎಣಿಕೆ ವೇಳೆ ಸಿಬ್ಬಂದಿ ಈ ನೋಟನ್ನು ನೋಡಿ ತಬ್ಬಿಬ್ಬಾಗಿದ್ದಾರೆ.
ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ 20 ರೂಪಾಯಿ ನೋಟು ಪತ್ತೆಯಾಗಿದೆ. ನೋಟಿನ ಮೇಲೆ ಬರೆದಿರುವ ಈ ವಾಕ್ಯ ನೋಡಿ ಸಿಬ್ಬಂದಿ ಅಚ್ಚರಿಗೊಂಡರು. ಕೂಡಲೇ ಸಿಬ್ಬಂದಿ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಅಂದಹಾಗೆ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಹುಂಡಿ ಎಣಿಕೆ ನಡೆಯುತ್ತದೆ. ಈ ವರ್ಷ ಹುಂಡಿಯಿಂದ ಸುಮಾರು ರೂ. 60 ಲಕ್ಷ ನಗದು ಹಾಗೂ 1 ಕೆಜಿ ಬೆಳ್ಳಿ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲಕ್ಕೆ ಬರುವ ಕೆಲ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ಅದನ್ನು ಹುಂಡಿಗೆ ಹಾಕುತ್ತಾರೆ. ಇದೇ ರೀತಿ ಸೊಸೆಯೊಬ್ಬರು ತಮ್ಮ ಅತೆ ಸಾವಿನ ಕೋರಿಕೆ ಕೋರಿ ಹುಂಡಿಗೆ ಹಣ ಹಾಕಿದ್ದಾರೆ.