ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆ ಮೂಲದ ಬೋಟ್‌ಗೆ ಭಾರೀ ಅಲೆಗಳ ಕಾರಣದಿಂದ ಹಾನಿಯಾಗಿ, ಅರಬ್ಬೀ ಸಮುದ್ರದಲ್ಲೇ ಸಿಲುಕಿದ ಘಟನೆ ನಡೆದಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಭಾರೀ ಅಲೆಗಳು ಎದ್ದಿದ್ದು, ಮಲ್ಪೆ ಮೂಲದ ಬೋಟ್ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್‌ಗೆ ಹಗ್ಗ ಕಟ್ಟಿ ಎಳೆದು ತರಲಾಗುತ್ತಿತ್ತು.
ತೀರ ಪ್ರದೇಶಕ್ಕೆ ಎಳೆದು ತರುವ ಮುನ್ನವೇ ಹಗ್ಗ ತುಂಡಾಗಿ ಭಟ್ಕಳದ ಹೆಬಳೆ ಪಂಚಾಯತ್‌ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಸದ್ಯ ಬೋಟ್ ಸಿಲುಕಿಕೊಂಡಿದೆ. ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಬೋಟ್ ಹೊರತರಲಾರದೇ ಹಾಗೆಯೇ ಬಿಡಲಾಗಿದೆ.