ಶಿವಮೊಗ್ಗ: ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ ದಾಟಲು ಹೋಗಿ ವ್ಯಕ್ತಿಯೊಬ್ಬ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿರುವ ಘಟನೆ ಶಿವಮೊಗ್ಗ ತಾಲೂಕಿನ ಮುದುವಾಳ ಗ್ರಾಮದ ಕೊಡಂಜಿ ಹಳ್ಳದಲ್ಲಿ ನಡೆದಿದೆ. ಚಿನ್ನಿಕಟ್ಟೆಯ ಇಕ್ಬಾಲ್ ನಾಪತ್ತೆಯಾಗಿರುವ ವ್ಯಕ್ತಿ.
ಶಿವಮೊಗ್ಗದಿಂದ ಮುದುವಾಲ ಮಾರ್ಗವಾಗಿ ತೆರಳುತ್ತಿದ್ದ ವೇಳೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಇಕ್ಬಾಲ್ ಮುಂದಾಗಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಿದ್ದರಿಂದ ಇಕ್ಬಾಲ್ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಇಕ್ಬಾಲ್ ಪತ್ತೆಯಾಗಿಲ್ಲ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟದ ಕಾರ್ಯದಲ್ಲಿ ನಿರತರಾಗಿದ್ದಾರೆ.