ಮಂಗಳೂರು: ನಗರದಲ್ಲಿ ರಕ್ಷಿಸಲಾದ ಹೆಬ್ಬಾವೊಂದರ ದೇಹದಲ್ಲಿ 11 ಏರ್ ಗನ್ ಬುಲೆಟ್ ಪತ್ತೆಯಾದ ಬಗ್ಗೆ ವರದಿಯಾಗಿದೆ. ಬೆಕ್ಕೊಂದನ್ನು ನುಂಗಲಾಗದೆ ಸಂಕಷ್ಟಪಡುತ್ತಿದ್ದ ಹೆಬ್ಬಾವಿನ ದೇಹದಲ್ಲಿ ಏರ್ ಬುಲೆಟ್ ಪತ್ತೆಯಾಗಿದೆ. ನಗರದ ಆನೆಗುಂಡಿ ಬಳಿ ಹೆಬ್ಬಾವೊಂದು ಪರ್ಶಿಯನ್ ಬೆಕ್ಕನ್ನು ನುಂಗಲಾರದೆ ಕಷ್ಟಪಡುತ್ತಿತ್ತು. ಸ್ಥಳೀಯರು ಉರಗತಜ್ಞರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಉರಗ ತಜ್ಞ ಭುವನ್ ದೇವಾಡಿಗ ಹೆಬ್ಬಾವಿನ ದೇಹವನ್ನು ತಪಾಸಣೆ ನಡೆಸಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೆಬ್ಬಾವಿನ ಎಕ್ಸ್ ರೇ ಮಾಡಿಸಿದಾಗ ದೇಹದಲ್ಲಿ 11 ಏರ್ ಬುಲೆಟ್ ಗಳಿರುವುದು ಪತ್ತೆಯಾಗಿದೆ. ವರ್ಷಗಳ ಹಿಂದೆಯೇ ಈ ಏರ್ ಬುಲೆಟ್ ತಗುಲಿರುವ ಸಾಧ್ಯತೆಯಿದೆ. ಎರಡು ಬುಲೆಟ್ ಗಳನ್ನು ತೆರವುಗೊಳಿಸಲಾಗಿದೆ. ಪಶುವೈದ್ಯ ಡಾ. ಯಶಸ್ವಿ ಹಾವಿಗೆ ಚಿಕಿತ್ಸೆ ನೀಡಿದ್ದಾರೆ. ಹಾವು ಚೇತರಿಸಿಕೊಳ್ಳುತ್ತಿದೆ ಎಂದು ಉರಗತಜ್ಞ ಭುವನ್ ದೇವಾಡಿಗ ಹೇಳಿದ್ದಾರೆ.