ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ವೃತ್ತದಲ್ಲಿ ಸುಂದರವಾದ ಅಂಬೇಡ್ಕರ್ ಪ್ರತಿಮೆಯೊಂದಿಗೆ ಅಂಬೇಡ್ಕರ್ ವೃತ್ತ ನಿರ್ಮಿಸಲು ನುರಿತ ವಾಸ್ತು ಶಿಲ್ಪಿಗಳಿಂದ ಸಿದ್ಧಪಡಿಸಲಾದ ಮಾದರಿ ನೀಲನಕ್ಷೆ ಮತ್ತು ವಿನ್ಯಾಸವನ್ನು ವಿವಿಧ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುಧೀಶ್ ಶೆಟ್ಟಿ ಕಣ್ಣೂರು ಅವರಿಗೆ ಸಲ್ಲಿಸಲಾಗಿದೆ. ಈ ವೃತ್ತದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.
ಮುಖಂಡರ ನಿಯೋಗವು ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕ ಪ್ರವೀಣ್‌ಚಂದ್ರ ಆಳ್ವ, ಜಿಲ್ಲಾಧಿಕಾರಿ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಪ್ರಸ್ತಾಪಿತ ಅಂಬೇಡ್ಕರ್ ವೃತ್ತದ ನೀಲನಕ್ಷೆ ಮತ್ತು ವಿನ್ಯಾಸವನ್ನು ಸಲ್ಲಿಸಿದೆ.
ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಮುಖರನ್ನು ಭೇಟಿಯಾದ ನಿಯೋಗದಲ್ಲಿ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಅಹಿಂದ ಜಿಲ್ಲಾಧ್ಯಕ್ಷ ಭರತೇಶ್, ಸರ್ಕಾರದ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಶಾಂತಲಾ ಗಟ್ಟಿ, ಮಾಜಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತೇಜೋಮಯ, ಪರಿಶಿಷ್ಟ ಜಾತಿ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಆದಿದ್ರಾವಿಡ ಸಂಘದ ರಾಜ್ಯಾಧ್ಯಕ್ಷ ಶಿವಾನಂದ, ಸಾಮಾಜಿಕ ಕಾರ್ಯಕರ್ತ ಹ್ಯಾರಿ ಹೆನ್ರಿ ಡಿಸೋಜ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ್ ಕಾಂಚನ್, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮುಖಂಡರು, ಜಿಲ್ಲಾ ನಲಿಕೆ ಯಾನೆ ಪಾಣಾರ ಸಂಘದ ಅಧ್ಯಕ್ಷ ಪದ್ಮನಾಭ ಮೂಡುಬಿದ್ರಿ, ಸಾಮಾಜಿಕ ಕಾರ್ಯಕರ್ತೆ ವಸಂತಿ ಅಂಚನ್, ಕಂಕನಾಡಿ ಸತ್ಯ ಸಾರಮಾನಿ ದೈವಸ್ಥಾನದ ಅಧ್ಯಕ್ಷ ಅನಿಲ್ ಕಂಕನಾಡಿ, ಆರ್ ಟಿ ಐ ಕಾರ್ಯಕರ್ತ ಪ್ರಶಾಂತ್ ಭಟ್, ಕಲಾವಿದ ಹರೀಶ್, ತುಳುನಾಡ ರಕ್ಷಣಾ ವೇದಿಕೆ ಮುಂಬೈ ಸಂಘಟನಾ ಕಾರ್ಯದರ್ಶಿ ಯಶು ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.