ಮಂಗಳೂರು: ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ಗೀತಾ ಜಯಂತಿಯ ಪ್ರಯುಕ್ತ “ಗೀತಾಮೃತಮ್” ಅಖಂಡ ಗೀತಾ ಪಾರಾಯಣ ಕಾರ್ಯಕ್ರಮವು ರವಿವಾರ ನಗರದ ಸಂಘನಿಕೇತನದಲ್ಲಿ ನಡೆಯಿತು. ಕ್ಷೇತ್ರೀಯ ಸಂಘ ಚಾಲಕರಾದ ಡಾ. ವಾಮನ್ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀ ಭೋಜೆಗೌಡರವರು ಭಗವದ್ಗೀತೆಯ ಹಿರಿಮೆಯನ್ನು ತಿಳಿಸಿದರು. ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಭಗವದ್ಗೀತೆಯ ಪುಸ್ತಕವು ಇರಬೇಕು ಹಾಗೂ ಪ್ರತಿಯೊಬ್ಬ ಹಿಂದೂ ಭಗವದ್ಗೀತೆಯನ್ನು ಓದುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ನಿಕಟಪೂರ್ವ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಉಪಸ್ಥಿತರಿದ್ದರು. ಸಂಸ್ಕೃತ ಭಾರತೀಯ ಅಧ್ಯಕ್ಷರಾಗಿರುವ ಡಾ. ವೇಣುಗೋಪಾಲ್ ಇವರು ಅಧ್ಯಕ್ಷತೆಯನ್ನು ವಹಿಸಿದರು.
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಶ್ರೀ ಕೃಷ್ಣರಾಜ ಕುತ್ಪಾಡಿ ಅವರು ಶ್ರೀಮದ್ ಭಗವದ್ಗೀತೆಯ ಮಹತ್ವದ ಬಗ್ಗೆ ತಮ್ಮ ವಿಶೇಷ ಪ್ರವಚನದಲ್ಲಿ ಗೀತೆಯು ಕೃಷ್ಣಾರ್ಜುನರ ಸಂವಾದ ಮಾತ್ರವಲ್ಲದೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅಂತರಾಳದ ತುಮುಲ ಹಾಗೂ ಅದಕ್ಕೆ ನಿರ್ಧಿಷ್ಟ ಪರಿಹಾರ ಎಂದು ತಿಳಿಸಿದರು. ಪ್ರಾಂತ ಸಂಪರ್ಕ ಪ್ರಮುಖ ಸತ್ಯನಾರಾಯಣ ಕೆ ವಿ ಉಪಸ್ಥಿತರಿದ್ದರು. ಪೂರ್ಣ 700 ಶ್ಲೋಕಗಳ ಪಾರಾಯಣ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಸಂಸ್ಕೃತ ಭಾರತೀಯ ಸದಸ್ಯರಾದ ಡಾ.ಮಧುಕೇಶ್ವರ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ಶೀಲಾ ಶಂಕರಿ ಸ್ವಾಗತಿಸಿದರು. ಶ್ರೀ ಗಜಾನನ ಬೋವಿಕಾನ ವಂದಿಸಿದರು, ಮಹಾನಗರ ಸಂಯೋಜಕಿ ಸಂಧ್ಯಾ ಕಾಮತ್ ಹಾಗೂ ಇತರ ಸದಸ್ಯರು ಕಾರ್ಯಕ್ರಮ ಸಂಯೋಜಿಸಿದರು. ಶ್ರೀ ಗಣಪತಿ ಪೈ ಯವರು ಪಾರಾಯಣ ನಡೆಸಿಕೊಟ್ಟರು.