ಮಂಗಳೂರು: ವಕೀಲರ ಸಂಘ ನನ್ನ ಮನೆ. ನನ್ನ ಮನೆಯವರು ನನ್ನ ಮೇಲಿಟ್ಟಿರುವ ನಿರೀಕ್ಷೆಗಳು, ವಿಶ್ವಾಸದ ಬಗ್ಗೆ ನನಗೆ ಅರಿವಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.
ಮಂಗಳವಾರ ಮಂಗಳೂರು ಬಾರ್ ಅಸೋಸಿಯೇಷನ್ ಗೆ ಭೇಟಿ ನೀಡಿದ ಅವರು, ವಕೀಲರ ಜೊತೆ ಸಂವಾದ ನಡೆಸಿದರು. ಸುಮಾರು 29 ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯನಾಗಿದ್ದೇನೆ. ಆದ್ದರಿಂದ ಜಿಲ್ಲೆಯ ಬೇಡಿಕೆಗಳು, ಇಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ನನಗೆ ಅರಿವಿದೆ. ಈಗ ಆಗಿರುವ ಕೆಲಸಗಳು ಹಾಗೂ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟತೆ ಇದೆ. ಆದ್ದರಿಂದ ಅಭಿವೃದ್ಧಿ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ ಎಂದರು.
ನಾನೋರ್ವ ವಿದ್ಯಾವಂತ ವಕೀಲ ಎಂಬ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಚುನಾವಣೆಗೆ ನಿಲ್ಲಿಸಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆಗೆ ದೇಶವನ್ನು ವಿಶ್ವ ಗುರುವಾಗಿಸುವ ಕೆಲಸ ನಡೆಯಬೇಕಿದೆ ಎಂದರು.
ಮಂಗಳೂರಿನಲ್ಲಿ 2 ಸಾವಿರಕ್ಕೂ ಮಿಕ್ಕಿದ ವಕೀಲರಿದ್ದಾರೆ. ವಕೀಲರ ಸಂಘ ಅನೇಕ ಬೇಡಿಕೆಗಳನ್ನು ಎದುರು ನೋಡುತ್ತಿದ್ದು, ಇದಕ್ಕೆ ಮೊದಲ ಆದ್ಯತೆ ನೀಡಿ, ಗ್ರಂಥಾಲಯ, ರೆಸ್ಟ್ ರೂಂ ಮೊದಲಾದ ಕೆಲಸಗಳನ್ನು ಮಾಡಲಾಗುವುದು ಎಂದರು.
ನಾಳೆ ನಾಮಪತ್ರ ಸಲ್ಲಿಕೆ:
ನಾಳೆ ಅಂದರೆ ಏಪ್ರಿಲ್ 3ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಟೌನ್ ಹಾಲ್ ನಲ್ಲಿ ಕಾರ್ಯಕರ್ತರ ಸಭೆ ನಡೆದು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಲಾಗುವುದು. ಜಿಲ್ಲಾಧಿಕಾರಿಯಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ವಕೀಲರು ಕೂಡ ಜೊತೆಯಾಗಬೇಕು ಎಂದು ಪದ್ಮರಾಜ್ ಆರ್. ಮನವಿ ಮಾಡಿಕೊಂಡರು. ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಶುಭಹಾರೈಸಿ, ಪದ್ಮರಾಜ್ ಆರ್. ಅವರ ನಾಮಪತ್ರ ಸಮಾರಂಭದಲ್ಲಿ ಭಾಗವಹಿಸಲು ಕರೆ ನೀಡಿದರು. ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ಮನೋರಾಜ್, ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಕಾರ್ಪೋರೇಟರ್ ನವೀನ್ ಡಿಸೋಜಾ, ಮಾಜಿ ಕಾರ್ಪೊರೇಟರ್ ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು.