ಮಂಗಳೂರು: ಕ್ಯಾಂಡಿ ಗಂಟಲಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗುವಿನ ಜೀವವನ್ನ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತುನಿಗಾ ಘಟಕದ ವೈದ್ಯರು ರಕ್ಷಿಸಿದ್ದಾರೆ.
2 ವರ್ಷದ ಮಗು ಕ್ಯಾಂಡಿ ತಿನ್ನುವಾಗ ಗಂಟಲಲ್ಲಿ ಸಿಲುಕಿ, ಉಸಿರಾಟದ ಸಮಸ್ಯೆಗೆ ಸಿಲುಕಿತ್ತು. ಮಗುವಿನ ಪಾಲಕರು ಘಟನೆ ನಡೆದ 10 ರಿಂದ 15 ನಿಮಿಷದಲ್ಲಿ ಆಸ್ಪತ್ರೆಗೆ ಕರೆತಂದರು. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರ ತಂಡ ಮಗುವಿನ ಉಸಿರಾಟಕ್ಕೆ ತಡೆಯಾಗಿದ್ದ ಕ್ಯಾಂಡಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗು ಬಹಳ ನಿಶ್ಯಕ್ತಗೊಂಡಿದ್ದು, ಆಮ್ಲಜನಕ ಪ್ರಮಾಣವೂ ಅಪಾಯಮಟ್ಟದಲ್ಲಿ ಕಡಿಮೆಯಾಗಿತ್ತು. ಉಸಿರಾಟ ನಡೆಸಲು ಕೂಡ ಕಷ್ಟವಾಗುತ್ತಿತ್ತು. ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ‘ವಿಶೇಷವಾದ ಚೋಕಿಂಗ್ ರೆಸ್ಕ ವಿಧಾನವನ್ನು’ ಕೈಗೊಂಡರು.
ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ಧವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕುವ ಮೂಲಕ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರ ತೆಗೆಯಲಾಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ಸುಗಮವಾಯಿತು. ಸದ್ಯ ಮಗುವನ್ನು ನಿಗಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಗಿದೆ. ಜತೆಗೆ ಎಕ್ಸ್ ರೇ ಮೂಲಕ ಮತ್ತೆ ಯಾವುದೇ ರೀತಿಯ ಸಮಸ್ಯೆ ಇದೆಯೇ ಎಂದು ಕೂಡ ಪರೀಕ್ಷಿಸಲಾಗಿದೆ ಎಂದು ತುರ್ತುಚಿಕಿತ್ಸಾ ಘಟಕ ಕ್ಲಸ್ಟರ್ ಮುಖ್ಯಸ್ತರಾದ ಡಾ. ಜೀಧು ರಾಧಾಕೃಷ್ಣನ್ ಹೇಳಿದರು.