ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೆಳ್ತಂಗಡಿಯಲ್ಲಿ ಭಾನುವಾರ ಭಾರತೀಯ ಜೈನ್‌ಮಿಲನ್ ನೇತೃತ್ವದಲ್ಲಿ ಆಯೋಜಿಸಿದ ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಭಜನೆಯಲ್ಲಿ ದೇವರ ನಾಮಸ್ಮರಣೆಯೊಂದಿಗೆ ಆದರ್ಶಗುಣಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.
ಉಜಿರೆ: ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬAಧವಿದ್ದು, ಅಂತರಾತ್ಮದಲ್ಲಿ ದೇವರನ್ನು ಸ್ಮರಿಸಿ ಧ್ಯಾನ ಮಾಡಿ ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮಕ್ಕಳಿಗೂ, ನಿತ್ಯವೂ ಭಜನೆ ಹಾಡುವ ಸಂಸ್ಕಾರವನ್ನು ನೀಡಿದರೆ ಅವರು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಭಾರತೀಯ ಜೈನ್‌ಮಿಲನ್ ನೇತೃತ್ವದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಶಾಖೆಯ ಸಹಯೋಗದೊಂದಿಗೆ ಆಯೋಜಿಸಿದ ಮಂಗಳೂರು ವಿಭಾಗಮಟ್ಟದ ಜಿನಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಜನೆಯನ್ನು ಸ್ಪರ್ಧೆಗಾಗಿ ಕಲಿಯದೆ ಮನೆಯಲ್ಲಿ ನಿತ್ಯವೂ ಸಹಜವಾಗಿ ಭಜನೆ ಹಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸೋಲು-ಗೆಲುವಿನ ಬಗ್ಯೆ ಚಿಂತಿಸದೆ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಭಜನಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಹೇಳಿದರು.
ಸಾಧ್ಯವಾದರೆ ಮಕ್ಕಳೆ ಸಾಹಿತ್ಯ ರಚನೆ ಮಾಡಿ ರಾಗ, ಭಾವ, ತಾಳ ಸಂಯೋಜನೆಯೊAದಿಗೆ ಭಜನೆ ಹಾಡುವ ಅಭ್ಯಾಸ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಇಂದು (ಸೋಮವಾರ) ಹೆಗ್ಗಡೆಯವರ ೭೬ನೆ ಜನ್ಮದಿನ ಆಚರಣೆಗಾಗಿ ನಿರೀಕ್ಷಾ ಹೊಸ್ಮಾರು ಜನ್ಮದಿನದ ಶುಭಾಶಯ ಕೋರುವ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು.
ಜೈನ್‌ಮಿಲನ್ ವತಿಯಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಗೌರವಪೂರ್ವಕವಾಗಿ ಅರ್ಪಿಸಲಾಯಿತು. ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರಕುಮಾರ್, ಉಜಿರೆಯ ಸೋನಿಯಾ ಯಶೋವರ್ಮ, ಪೂರನ್‌ವರ್ಮ, ಪೆರಿಂಜೆ ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳಿತಮೊಕ್ತೇಸರ ಜೀವಂಧರಕುಮಾರ್, ಭಾರತೀಯ ಜೈನ್‌ಮಿಲನ್ ವಲಯ ೮ ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್, ಮೂಡಬಿದ್ರೆಯ ನೋಟರಿ ಶ್ವೇತಾ ಜೈನ್, ಕಾರ್ಕಳದ ಶಶಿಕಲಾ ಹೆಗ್ಡೆ, ವೇಣೂರು ಜೈನತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಹಾಗೂ ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಸುದರ್ಶನ್‌ಜೈನ್ ಬಂಟ್ವಾಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಜಿರೆಯ ಬಿ. ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕಿ ದಿವ್ಯಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.
ಭಜನಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ 45 ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ ೩೨ ತಂಡಗಳು ಸೇರಿದಂತೆ ಒಟ್ಟು ಐದುನೂರಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದರು.