ಮಂಗಳೂರು: ಬಹು ವಿಶೇಷತೆ ಹಾಗೂ ಅತ್ಯಂತ ವಿಜೃಂಭಣೆಯ ಮೂಲಕ ಜನಾಕರ್ಷಣೆಗೆ ಕಾರಣವಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಮೆರವಣಿಗೆ ಬುಧವಾರ ನೆರವೇರಿತು. ಲಕ್ಷಾಂತರ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ ಸಹಿತ ನವದುರ್ಗೆಯರ ಜತೆಗೆ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಶ್ರದ್ಧಾ ಭಕ್ತಿಯಿಂದ ಶೋಭಾಯಾತ್ರೆಯಲ್ಲಿ ತರಲಾಯಿತು. ಮಂಗಳೂರು ದಸರಾ ಮಹೋತ್ಸವ ಮೆರವಣಿಗೆ ವರ್ಷದಿಂದ ವರ್ಷಕ್ಕೆ ವಿಶೇಷ ಆಕರ್ಷಣೆ ಯನ್ನು ಪಡೆಯುತ್ತಿರುವ ನಿಮಿತ್ತ ಲಕ್ಷಾಂತರ ಪ್ರವಾಸಿಗರು ಮಂಗಳೂರಿಗೆ ಆಗಮಿಸಿ, ಶೋಭಾಯಾತ್ರೆಯನ್ನು ಕಣ್ಣುಂಬಿಕೊಂಡರು.

ಕೊರೊನಾ ಕಾರಣದಿಂದ 2 ವರ್ಷ ನಗರ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಬಹುಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. 2019ರ ಮಾದರಿಯಲ್ಲಿಯೇ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳು ಮೆರವಣಿಗೆಯ ಮೊದಲಿಗೆ ಸಾಗಿದ ಬಳಿಕ ಹಲವು ಸ್ತಬ್ಧಚಿತ್ರಗಳು ಸಾಗಿದವು.

ವಿಭಿನ್ನ ರೀತಿಯ ಸ್ತಬ್ಧಚಿತ್ರಗಳು ಶೋಭಾಯಾತ್ರೆಯಲ್ಲಿ ಗಮನಸೆಳೆದವು. ಹಲವು ಹಸುರು ಕೊಡೆಗಳು ಮೆರವಣಿಗೆ ಯಲ್ಲಿದ್ದವು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖ್ಯಾತಿ ಗಳಿಸಿರುವ ಆಕರ್ಷಣೀಯ ಜನಪದ ಕಲಾ ತಂಡಗಳು ಬೇರೆ ಬೇರೆ ಜಿಲ್ಲೆಗಳ – ವೈಶಿಷ್ಟತೆಯನ್ನು ಸಾರುವ, ಅಲ್ಲಿನ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರಕಾರದ ಮೂಲಕ ಮೆರವಣಿಗೆಯಲ್ಲಿ ಗಮನ ಸೆಳೆಯಿತು.