ಮುಡಿಪು: ಮಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ರಾತ್ರಿ ಪ್ರತಿಭಟನೆ ನಡೆದಿದೆ. ಹಾಸ್ಟೆಲ್ ನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಕೆಲವು ಸಮಯದಿಂದ ಆಹಾರದ ಗುಣಮಟ್ಟ ಕಳಪೆಯಾಗಿದೆ.. ಅಡಡುಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿ ಹಳಸಿದ ಆಹಾರ ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿದ್ದ ವಿಶ್ವವಿದ್ಯಾಲಯದ ಕುಲಪತಿಗಳು ಪ್ರತಿಭಟನಾ ನಿರತರೊಂದಿಗೆ ಮಾತನಾಡಿದರು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕುಲಸಚಿವ ರಾಜು ಮೊಗವೀರ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು, ಆದರೂ ತಡರಾತ್ರಿವರೆಗೂ ಪ್ರತಿಭಟನೆ ನಡೆಯಿತು. ಕುಲಪತಿಗಳು ಸ್ಥಳಕ್ಕೆ ಬರಬೇಕೆಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದರು. ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.