ಬಂಟ್ವಾಳ: ಮಂಗಳೂರಿನ ಅತ್ತಾವರದ ಯುವಕನೊಬ್ಬ ಬಿ.ಸಿ. ರೋಡಿನ ಹೆಸರಾಂತ ಹೋಟೆಲ್ ಒಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಅತ್ತಾವರ ನಿವಾಸಿ ಮೂವತ್ತರ ಹರೆಯದ ಪ್ರಜ್ವಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇ 5ರಂದು ಈತ ಬಿ.ಸಿ. ರೋಡಿನ ಹೋಟೆಲ್ ಒಂದರಲ್ಲಿ ರೂಂ ಮಾಡಿದ್ದ. ಮೇ 6ರಂದು ರಾತ್ರಿ ಊಟ ಮುಗಿಸಿ ಬಾಗಿಲು ಹಾಕಿಕೊಂಡಿದ್ದ ಈತ ಇಂದು ಬೆಳಿಗ್ಗೆ ಬಾಗಿಲು ತೆಗೆಯದಿದ್ದಾಗ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ತೆಗೆದುನೋಡಿದಾಗ ಈತನ ಮೃತದೇಹ ಪತ್ತೆಯಾಗಿದೆ.
ಆನ್ ಲೈನ್ ಸಂಸ್ಥೆಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ತಾನು ಕೆಲಸ ಮಾಡುವ ಸಂಸ್ಥೆಯಿಂದ ಅರುವತ್ತು ಸಾವಿರ ರೂ. ಸಾಲ ಮಾಡಿದ್ದ ಪ್ರಜ್ವಲ್ ಈ ಬಗ್ಗೆ ಹಣ ಹಿಂದಿರುಗಿಸಲಾಗದ ಬಗ್ಗೆ ಬೇಸರಿಸುತ್ತಿದ್ದನೆನ್ನಲಾಗಿದೆ. ಈ ನಡುವೆ ಈತ ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಿದ್ದರಿಂದಲೂ ತೀವ್ರ ನೊಂದಿದ್ದ ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಂಟ್ವಾಳ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.