ಬಂಟ್ವಾಳ: ಇಲ್ಲಿನ ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ರೂ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ನಾರಾಯಣಗುರು ಮಂದಿರ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಗುಡಿ ಹಾಗೂ ಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ಇದೇ 10ರಂದು ಬೆಳಿಗ್ಗೆ 8.30 ಗಂಟೆಗೆ ಶಿಲಾನ್ಯಾಸ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ಕಡೇಶಿವಾಲಯ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಿಗಿ ಶಿಲಾನ್ಯಾಸ ನೆರವೇರಿಸಲಿದ್ದು, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು’ ಎಂದರು. ಸಂಘದ ಅಧ್ಯಕ್ಷ ಸುರೇಶ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ವಕೀಲ ಪದ್ಮರಾಜ್ ಆರ್.ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವರು. ‘ ಇದೇ ವೇಳೆ ಸಂಘದ ವತಿಯಿಂದ ಆರಂಭಗೊಂಡ ಶ್ರೀ ನಾರಾಯಣಗುರು ಸಹಕಾರ ಸಂಘವನ್ನು ಮುಂಬೈ ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸುವರು.
ಕಳೆದ 31 ವರ್ಷಗಳ ಹಿಂದೆ ಆರಂಭಗೊಂಡ ಸಂಘವು ಸ್ಥಳೀಯ 10 ಗ್ರಾಮಗಳ ವ್ಯಾಪ್ತಿಯಲ್ಲಿ ಸಮಾರು 1500 ಮಂದಿ ಸದಸ್ಯರನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ನಾರಾಯಣ ಸಾಲ್ಯಾನ್, ಲೋಕೇಶ ಬಂಗೇರ ಮಾಣಿ, ಚಂದ್ರಶೇಖರ ಪೂಜಾರಿ ಇದ್ದರು.